2023ರ ಹೊತ್ತಿಗೆ ಬಿಜೆಪಿ-ಸಂಘ ಪರಿವಾರಗಳು ನಿಷ್ಕ್ರಿಯ: ಕಾಂಗ್ರೆಸ್ ಓಬಿಸಿ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ
ದಾವಣಗೆರೆ, ಆ. 2- 2023 ರ ಹೊತ್ತಿಗೆ ಬಿಜೆಪಿ ಮತ್ತು ಸಂಘ ಪರಿವಾರಗಳು ನಿಷ್ಕ್ರಿಯಗೊ ಳ್ಳಲಿದ್ದು, ಕಾಂಗ್ರೆಸ್ ಪಕ್ಷ ಸಂಘಟನಾತ್ಮಕ ಶಕ್ತಿಯ ಮೂಲಕ ಮುಂಬರುವ ಚುನಾವಣೆ ಎದುರಿಸಲು ಸಜ್ಜಾಗಬೇಕಾಗಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಒಬಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರದಲ್ಲಿ ಹಿಮಾಲಯದಷ್ಟು ಎತ್ತರ ಭ್ರಷ್ಟಾಚಾರ ಮನೆ ಮಾಡಿದ್ದು, ಹಾಲಿ ಸರ್ಕಾರ ಕೂಡ ನಿಷ್ಕ್ರಿಯೆಗೊಂಡಿದ್ದು, ಬಸವರಾಜ ಬೊಮ್ಮಾಯಿ ಡಮ್ಮಿ ಮುಖ್ಯಮಂತ್ರಿ, ಪೆನ್ ಯಡಿಯೂರಪ್ಪ ಅವರ ಕೈಲಿದೆ ಎಂದು ಅವರು ಲೇವಡಿ ಮಾಡಿದರು.
ರಾಜ್ಯದಲ್ಲಿ ಶೇ.52 ರಷ್ಟು ಹಿಂದುಳಿದ ವರ್ಗದವರಿದ್ದು, ಇದರಲ್ಲಿ 197 ಹಿಂದುಳಿದ ಸಮುದಾಯಗಳಿವೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಸಮುದಾಯಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.
ರಾಜ್ಯ ಸರ್ಕಾರದ ಒಟ್ಟು ಬಜೆಟ್ 2.46 ಲಕ್ಷ ಕೋಟಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ 6 ಸಾವಿರ ಕೋಟಿ ರೂ. ಗಳ ಅನುದಾನವನ್ನು ಮೀಸಲಿರಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ 400 ಕೋಟಿ ಗೆ ಅನುದಾನ ಇಳಿಕೆ ಮಾಡಿತು. ಹಿಂದುಳಿದ ವರ್ಗಗಳ 100 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಕೈಬಿಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಬಿಜೆಪಿ ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಜನರನ್ನು ವಂಚಿಸುತ್ತಾ ಬಂದಿದೆ. ಪ್ರಧಾನಿ ಮೋದಿ ಅವರು 100 ದಿನಗಳಲ್ಲಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ, ಮೂರು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿದರು.
ಹರಿಹರದ ಶಾಸಕ ಎಸ್. ರಾಮಪ್ಪ ಮಾತನಾಡಿ, ಬಿಜೆಪಿ ಸರ್ಕಾರದಿಂದ ಯಾರಿಗೂ ಕೂಡ ಒಳಿತಾಗಿಲ್ಲ. ಇದುವರೆಗೂ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಅವರದೇ ಆಳ್ವಿಕೆಯಾಗಿತ್ತು. ಕಮೀಷನ್ ಕೊಟ್ಟು ಅನುದಾನ ಮಂಜೂರು ಮಾಡಿಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿ ಅವರು ಕೇವಲ ರಬ್ಬರ್ ಸ್ಟ್ಯಾಂಪ್ ಇದ್ದಂತೆ ಎಂದು ಕುಟುಕಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಸುಳ್ಳು ಆಶ್ವಾಸನೆ ಕೊಡುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಐಸಿ, ರೈಲ್ವೆ, ವಿಮಾನಯಾನ ಮುಂತಾದ ಸೇವಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನೇ ಮಾರಲು ಹೊರಟಿದ್ದಾರೆ. ಅತ್ಯಂತ ಕೆಟ್ಟ ಸರ್ಕಾರ ಆಡಳಿತ ನಡೆಸುತ್ತಿದ್ದು, ಇವರ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನಲ್ಕುಂದ ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಅನಿತಾಬಾಯಿ ಮಾಲತೇಶರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡರಾದ ಎ. ನಾಗರಾಜ್, ಎಸ್. ಮಲ್ಲಿಕಾರ್ಜುನ್, ಸತೀಶ್, ಉಮಾಪತಿ, ನಾಗೇಂದ್ರಪ್ಪ, ಮಂಜುನಾಥ್, ಅಭಿದಾಲಿ, ಜಮ್ನಳ್ಳಿ ನಾಗರಾಜ್, ಮುನಿರತ್ನಮ್ಮ, ಶ್ರೀನಿವಾಸ್ ನಂದಿಗಾವಿ, ಉಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗ ಗಳ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಗೊಂಡಿರುವ ಜಮ್ನಳ್ಳಿ ನಾಗರಾಜ್ ಹಾಗೂ ಹರಿಹರದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವ ನಂದಿಗಾವಿ ಶ್ರೀನಿವಾಸ್ ಅವರನ್ನೂ ಸಹ ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.