ಗರ್ಭಿಣಿ-ಮಗು ಸಾವು: ಕೆಡಿಪಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ ಅಸಮಾಧಾನ
8 ನ್ಯಾಯ ಬೆಲೆ ಅಂಗಡಿ ಅಮಾನತ್ತು, 3 ಪರವಾನಗಿ ರದ್ದು : ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 8 ನ್ಯಾಯಬೆಲೆ ಅಂಗಡಿ ಪರವಾನಿಗೆ ಅಮಾನತ್ತುಗೊಳಿಸಿದ್ದು, 3 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.
ದಾವಣಗೆರೆ, ಮಾ.16- ಜಿಲ್ಲಾಸ್ಪತ್ರೆ ಕಾರ್ಯವೈ ಖರಿ, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿ.ಪಂ. ಅಧ್ಯಕ್ಷರು, ಸ್ಥಾಯಿ ಸಮಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜಿಲ್ಲಾ ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಹರಪನಹಳ್ಳಿ ತಾಲ್ಲೂಕಿನ ಕಾವ್ಯ ಎಂಬ ಯುವತಿ ಹಾಗೂ ಆಕೆಯ ಗರ್ಭದಲ್ಲಿದ್ದ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಕರು ದೂರು ಸಲ್ಲಿಸಿರುವ ಬಗ್ಗೆ ಅಧ್ಯಕ್ಷೆ ಶಾಂತಕುಮಾರಿ ಸಭೆಯಲ್ಲಿ ಪ್ರಸ್ತಾಪಿಸಿ, ಸಾವಿಗೆ ಕಾರಣ ಪ್ರಶ್ನಿಸಿದರು. ಅಲ್ಲದೆ ಮೃತ ಯುವತಿಯ ಸಂಬಂಧಿ, ಜಿಲ್ಲಾ ಪಂಚಾಯ್ತಿ ಕಚೇರಿ ಸಿಬ್ಬಂದಿ ಪರಮೇಶ್ವರಪ್ಪನನ್ನು ಸಭೆಗೆ ಕರೆಯಿಸಿ ಅಧಿಕಾರಿಗಳ ಎದುರು ಘಟನೆ ಬಗ್ಗೆ ವಿವರಿಸುವಂತೆ ಹೇಳಿದರು.
ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಯುವತಿಯ ಸಾವಿಗೆ ಕಾರಣ ಎಂದು ಆರೋಪಿಸಿದ ಪರಮೇಶ್ವರಪ್ಪ ವೈದ್ಯರು, ನರ್ಸ್‌ಗಳ ಅತಿರೇಕದ ನಡವಳಿಕೆ ಬಗ್ಗೆ ದೂರಿದರು. ಈ ಬಗ್ಗೆ ಪೊಲೀಸ್ ದೂರು ಸಹ ದಾಖಲಾಗಿರುವುದಾಗಿ ಹೇಳಿದರು.
ಮೃತರ ಸಂಬಂಧಿಯ ಆರೋಪ ಅಲ್ಲಗೆಳೆದ ವೈದ್ಯರು, ತುಂಬು ಗರ್ಭಿಣಿಯಾಗಿದ್ದ ಯುವತಿ ಹರಪನಹಳ್ಳಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಬಿ.ಪಿ., ತೀವ್ರ ರಕ್ತಸ್ರಾವ ಇತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಹೆರಿಗೆ ವೇಳೆ ಪಿಟ್ಸ್ ಬಂದ ಕಾರಣ ತಾಯಿ-ಮಗು ಸಾವನ್ನಪ್ಪಿದ್ದಾರೆ. ಶವ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಿದೆ ಎಂದು ಹೇಳಿದರು.
ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಭಾನುವಾರವೂ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಈ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೀವೂ ಸಹ ವಿವರವಾಗಿ ದೂರು ಬರೆದು ವೈದ್ಯಾಧಿಕಾರಿಗಳಿಗೆ ಕೊಡಿ ಎಂದು ಸಂಬಂಧಿಗೆ ಸೂಚಿಸಿದರು.
1-5ನೇ ತರಗತಿ ನಡೆಸಿದರೆ ಕ್ರಮ: 1 ರಿಂದ 5ನೇ ತರಗತಿ ಒಳಗಿನ ಮಕ್ಕಳಿಗೆ ತರಗತಿ ನಡೆಸುವ ಶಾಲೆಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಳೆದ ವರ್ಷಕ್ಕಿಂತ 1 ಸಾವಿರ ಹೆಚ್ಚು ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ ಎಂದಾಗ, ರಾಜ್ಯ ಮಟ್ಟದಲ್ಲಿ ಜಿಲ್ಲೆ 10 ರೊಳಗೆ ಸ್ಥಾನ ಪಡೆಯಬೇಕು, ಈ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಿ. ಶಾಲಾ ಮಕ್ಕಳಿಗೆ ಆಗಾಗ್ಗೆ ಕೋವಿಡ್ ಪರೀಕ್ಷೆ ನಡೆಸುವಂತೆ ಸಿಇಒ ಸೂಚಿಸಿದರು.
4912 ಅನರ್ಹ ಬಿಪಿಎಲ್ ಕಾರ್ಡ್ ರದ್ದು : ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 4912 ಅನಧಿಕೃತ ಬಿ.ಪಿ.ಎಲ್. ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಸಕ್ತ ವರ್ಷ ನೊಂದಣಿಗೊಂಡ ನಾಲ್ಕು ಚಕ್ರ ವಾಹನಗಳ ಮಾಲೀಕರ ಹೆಸರು, ಆಧಾರ್ ಸಂಖ್ಯೆಯ ವಿವರ ಪಡೆದು, ಅಂತಹವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಪತ್ತೆ ಹಚ್ಚಿ, ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಆಹಾರ ಇಲಾಖೆ ಪ್ರಾರಂಭಿಸಿದೆ ಎಂದರು.
ವಿಕಲಚೇತನರ ಬೇಡಿಕೆ ಆಧಾರದ ಸಮೀಕ್ಷೆ : ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೇವಲ ವಾಹನ, ಸಾಧನ ಸಲಕರಣೆ ನೀಡುತ್ತಿರುವುದು ಸರಿಯಲ್ಲ. ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ನೆರವಿನೊಂದಿಗೆ, ಪ್ರತಿ ಗ್ರಾಮಗಳಲ್ಲಿ ವಿಕಲಚೇತನರ ಬೇಡಿಕೆಗಳು, ವಸತಿ ಸೌಕರ್ಯ, ವೃತ್ತಿ ತರಬೇತಿ, ಕೌಶಲ್ಯ ಮುಂತಾದ ಬೇಡಿಕೆ ಆಧಾರದ ಸಮೀಕ್ಷೆ ಕೈಗೊಂಡು, ವರದಿ ಪಡೆಯಬೇಕು. ಈ ವರದಿಯನ್ನು ಕ್ರೋಢೀಕರಿಸಿ, ಕ್ರಿಯಾ ಯೋಜನೆ ರೂಪಿಸುವಂತೆ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಸೂಚಿಸಿದರು.
ವಿಕಲಚೇತನರಿಗೆ ಆದಾಯ ತರುವಂತಹ ವೃತ್ತಿ ಆಧಾರಿತ ತರಬೇತಿ ಕೊಡಿಸುವುದು, ವಸತಿ ರಹಿತರಿಗೆ ಮನೆ ಒದಗಿಸುವುದು, ಸಾಲ ಸೌಲಭ್ಯ ನೀಡಿಕೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಸೌಲಭ್ಯವನ್ನು ಪದೇ ಪದೇ ಒಂದೇ ಫಲಾನುಭವಿಗೆ ನೀಡುವಂತಾಗಬಾರದು. ಕಳೆದ 10 ವರ್ಷಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿ ಇಲಾಖೆಯಲ್ಲಿ ಲಭ್ಯವಿರಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕು. ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸಬಾರದು. ಪ್ರತಿ ಸೋಮವಾರ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವಂತೆ ಸಿಇಒ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.