ಪಾರ್ಕ್ ಜಾಗದಲ್ಲಿ ಮನೆ

ದೂಡಾದಿಂದ ಜಾಗ ಹದ್ದುಬಸ್ತು

ದಾವಣಗೆರೆ, ಮಾ.16- ನಗರದ ಬಸವೇಶ್ವರ ಬಡಾವಣೆಯ ಉದ್ಯಾನವನದ ಜಾಗದಲ್ಲಿ ಮನೆಗಳ ನಿರ್ಮಾಣದ ಹಿನ್ನೆಲೆಯಲ್ಲಿ ಇಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ, ಜಾಗವನ್ನು ಹದ್ದುಬಸ್ತು ಮಾಡಲಾಯಿತು.

ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಎಇಇ ಶ್ರೀಕರ್, ಸುದಯ್‌ಕುಮಾರ್ ಅವರೊಂದಿಗೆ ಬಸವೇಶ್ವರ ಬಡಾವಣೆಯಲ್ಲಿನ ಉದ್ಯಾನವನದ ಜಾಗವನ್ನು ಪರಿಶೀಲಿಸಿದ ದೂಡಾ ಅಧ್ಯಕ್ಷರು, ನಿರ್ಮಾಣ ಹಂತದಲ್ಲಿದ್ದ ಎರಡು ಮನೆಗಳ ಸುತ್ತ ಹದ್ದುಬಸ್ತು ಮಾಡಿಸಿದರು. 

ಡೋರ್‌ ನಂಬರ್ 3509/236 ಹಾಗೂ 3509/ ಹೆಚ್ 238 ರ ಎರಡೂ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ದೂಡಾ ಸ್ವತ್ತಿನಲ್ಲಿರುವ ಉದ್ಯಾನಕ್ಕೆ ಮೀಸಲಾದ 25 ಸಾವಿರ ಅಡಿ ಜಾಗದಲ್ಲಿ 10 ಸಾವಿರ ಅಡಿ ಅಳತೆಯಲ್ಲಿ ಇವು ನಿರ್ಮಿತವಾಗುತ್ತಿವೆ. ಒಂದು ಮನೆಯ ಮಾಲೀಕರು, ಕಟ್ಟಡ ನಿರ್ಮಾಣ ಪರವಾನಗಿಯನ್ನೇ ಪಡೆದಿಲ್ಲ. ಮತ್ತೊಬ್ಬ ಮಾಲೀಕರು ಪಡೆದಿದ್ದ ಕಟ್ಟಡ ನಿರ್ಮಾಣ ಪರವಾನಗಿಯನ್ನು ದೂಡಾ ಅಧಿಕಾರಿಗಳು ಮನವಿ ಸಲ್ಲಿಸಿ ಪಾಲಿಕೆ ವ್ಯಾಪ್ತಿಯಲ್ಲಿ ರದ್ದುಪಡಿಸಿದ್ದಾರೆ. ಪಾರ್ಕ್ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿ ದೂಡಾದಿಂದ ಇಬ್ಬರು ಮಾಲೀಕರಿಗೂ ನೋಟಿಸ್ ನೀಡಲಾಗಿತ್ತು. ಆದರೂ ಈವರೆಗೂ ಉತ್ತರ ಬಾರದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಹದ್ದು ಬಸ್ತು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ದೂಡಾ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪಾರ್ಕ್‌ಗಳ ಒತ್ತುವರಿ ಜಾಗ ತೆರವುಗೊಳಿಸಲಾಗುತ್ತಿದೆ. ದೇವರಾಜ ಅರಸು ಬಡಾವಣೆ ವ್ಯಾಪ್ತಿಯಲ್ಲಿ ಈ ಹಿಂದೆ 15 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿತ್ತು. ಬಸವೇಶ್ವರ ಬಡಾವಣೆಯಲ್ಲೂ ಅಕ್ರಮವಾಗಿ ನಿರ್ಮಿಸಲಾದ ಮನೆಗಳನ್ನು ಪತ್ತೆ ಹಚ್ಚಿದ್ದು, ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಲ್ಲದೆ ಡೋರ್‌ ನಂಬರ್ ರದ್ದತಿಗೆ ಬೆಂಗಳೂರು ಪ್ರಾದೇಶಿಕ ಕಚೇರಿಗೆ ಪತ್ರ ಬರೆಯಲಾಗುವುದು. ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ 2 ತಿಂಗಳಲ್ಲಿ ತೆರವಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 

ನಗರಾಭಿವೃದ್ಧಿ (ಸಿಡಿಪಿ) ಯೋಜನೆ ಪ್ರಕಾರವೇ ಮನೆ ನಿರ್ಮಿಸಿದ್ದೇವೆ. ಪಾರ್ಕ್ ಜಾಗದಲ್ಲಿ ಕಟ್ಟಿಲ್ಲ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದೇವೆ. ನಮಗೆ ಇದುವರೆಗೆ ದೂಡಾದಿಂದ ಯಾವುದೇ ನೋಟಿಸ್ ಬಂದಿಲ್ಲ. ಕೋರ್ಟ್ ಮೂಲಕ ಉತ್ತರ ನೀಡುವುದಾಗಿ ಮನೆ ಮಾಲೀಕನ ಮಗ ಭರತ್ ಹೇಳಿದ್ದಾರೆ.

error: Content is protected !!