ದಾವಣಗೆರೆ, ಜು.2- 21 ವರ್ಷಗಳ ದೇಶ ರಕ್ಷಣೆಗೆ ಜೀವನ ಮುಡಿಪಾಗಿಟ್ಟು ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿ ದಾವಣಗೆರೆಗೆ ಮರಳಿದ ವೀರ ಯೋಧ ಹೆಚ್.ಸುರೇಶ್ ರಾವ್ ಘೋರ್ಪಡೆ ಅವರನ್ನು ಜಿಲ್ಲಾಡಳಿತದಿಂದ ಇಂದು ನಗರಕ್ಕೆ ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ತೋಳಹುಣಸೆಯ ಸುರೇಶ್ ರಾವ್ ಅವರನ್ನು ಸನ್ಮಾನಿಸಿ, ಗೌರವದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್ ಅವರುಗಳಲ್ಲದೇ, ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು.
ಸ್ಥಳದಲ್ಲಿದ್ದವರೆಲ್ಲರೂ ಯೋಧನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ದೇಶ ರಕ್ಷಣೆಗಾಗಿ ಜೀವನ ತ್ಯಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಅನುಭವ ಹಂಚಿಕೊಂಡ ಯೋಧ ಸುರೇಶ್ ರಾವ್, ನಾನು ಸೇನೆಯಲ್ಲಿ ಕೆಲಸ ಮಾಡಿದ್ದು ಪುಣ್ಯ. ದೇಶ ಸೇವೆಗೆ ಜೀವನ ಮುಡುಪಾಗಿಟ್ಟಿದ್ದು ಸಾರ್ಥಕವಾಯಿತು. ಬಾಂಬ್ ಹುಡುಕಿದ್ದು, ಪಾಕ್‌ನ ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದು, ನಕ್ಸಲ್ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಸೇನೆಗೆ ಸೇರಿದವರಿಗೆ ತರಬೇತಿ ನೀಡಿದ್ದು ಮರೆಯಲಾರದ ಕ್ಷಣಗಳು. ನನಗೆ ಜಿಲ್ಲಾಡಳಿತ ಅಭಿನಂದಿಸಿದ್ದು, ತುಂಬಾ ಖುಷಿ ನೀಡಿದೆ. ಎಲ್ಲಾ ಯೋಧರಿಗೂ ಈ ಗೌರವ ಸಿಗುವಂತಾಗಲಿ ಎಂದು ಆಶಿಸಿದರು.
ಆಯುಧವಿಲ್ಲದೇ ನೆಲದಲ್ಲಿದ್ದ ಬಾಂಬ್‌ಗಳ ಪತ್ತೆ: ದೇಶ ಸೇವೆಗೆ ಹೋದ ಈ ಯೋಧ ಮಾಡಿರುವ ಸಾಧನೆ ಎಂಥವರನ್ನು ನಿಬ್ಬೆರಗಾಗಿಸುತ್ತೆ. ಶೌರ್ಯ, ಪರಾಕ್ರಮದಿಂದ ಸಿಕ್ಕಿರುವ ಮೆಡಲ್ ಇವರ ಸೇವೆಗೆ ಸಾಕ್ಷಿ. 21 ವರ್ಷಗಳ ಕಾಲ ಸೇನೆಯಲ್ಲಿದ್ದು, ದೇಶ ಸೇವೆ ಮಾಡಿರುವ ಹೆಚ್. ಸುರೇಶ್ ರಾವ್ ಘೋರ್ಪಡೆ ವೀರ ಯೋಧನ ಸಾಹಸಗಾಥೆ ನಮ್ಮ ದಾವಣಗೆರೆಗೆ ಹೆಮ್ಮೆ.
ತೋಳಹುಣಸೆಯ ಸುರೇಶ್ ರಾವ್ ಘೋರ್ಪಡೆ ಅವರ ತಂದೆ ಹನುಮಂತಪ್ಪ ಹಾಗೂ ತಾಯಿ ನಾಗಮ್ಮ ಇಟಗಿ. 1979ರ ಜೂನ್ 4ರಂದು ಜನಿಸಿದ್ದ ಸುರೇಶ್ ಅವರಿಗೆ ಚಿಕ್ಕವಯಸ್ಸಿನಲ್ಲೇ ದೇಶಕ್ಕಾಗಿ ತನ್ನ ಕೈಲಾದಷ್ಟು ಸೇವೆ ಸಲ್ಲಿಸಬೇಕೆಂಬ ಹಂಬಲ ಇತ್ತು. ಯುವಕನಾಗುತ್ತಿದ್ದಂತೆ 2000 ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿ ನಡೆದ ರಾಲಿಯಲ್ಲಿ ಸೇನೆಗೆ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ಹೊರಟು ನಿಂತರು. ಪ್ರಾಣದ ಹಂಗು ತೊರೆದು ಕೆಲವು ಬಾರಿ ಆಪತ್ತು ತಪ್ಪಿಸಿದ ಮಹಾ ಚತುರ. ಪಾಕಿಸ್ತಾನದ ಇಬ್ಬರು ಉಗ್ರರಿಗೆ ಗುಂಡು ಹೊಡೆದು ನೆಲಕ್ಕುರುಳಿಸುವ ಮೂಲಕ ಅಪಾಯ ತಪ್ಪಿಸಿದ್ದರು. ನೆಲದಲ್ಲಿ ಹೂತಿಟ್ಟಿದ್ದ ಬಾಂಬ್ ಗಳನ್ನು ಯಾವ ಆಯುಧವಿಲ್ಲದೇ ಪತ್ತೆ ಹಚ್ಚಿದ ಯೋಧ ಎಂಬ ಹೆಗ್ಗಳಿಕೆಗೆ ಪಾತ್ರರಾದ ಏಕೈಕ ಸೇನಾನಿ. ನದಿ ದಾಟುವ ವೇಳೆ ಕಳೆದು ಹೋಗಿದ್ದ ತಮ್ಮದೇ ಬಾಂಬ್ ಗಳನ್ನು ಹುಡುಕಿಕೊಟ್ಟ ದಿಟ್ಟ ಯೋಧ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸುರೇಶ್ ರಾವ್ ಆರಂಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿದ್ದರು. ಒಂದು ವರ್ಷ ಟ್ರೈನಿಂಗ್ ಪೂರ್ಣಗೊಳಿಸಿ ಭಾರತ್ ಲೈನ್ ಆಫ್ ಕಂಟ್ರೋಲ್‌ಗೆ ಕರ್ತವ್ಯಕ್ಕೆ ಸೇರಿದ್ದರು. ಆ ಬಳಿಕ ಜಮ್ಮು ಕಾಶ್ಮೀರದ ರಜೌರಿಗೆ ಸೇರ್ಪಡೆಯಾದರು. ಸೆಪ್ಟಂಬರ್ ತಿಂಗಳ 2002 ನೇ ಇಸವಿಯಲ್ಲಿ ಪಾಕಿಸ್ತಾನದ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಒಳನುಸುಳುವ ಯತ್ನದಲ್ಲಿದ್ದರು. ಆಗ ಹೆದರದೇ ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಭಾರತಕ್ಕೆ ಎದುರಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದರು.
ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ 2003ರಿಂದ 2006ರವರೆಗೆ ಕೆಲಸ ಮಾಡಿದ್ದರು. ಬಳಿಕ 2009ರವರೆಗೆ ಮೂರು ವರ್ಷ ರಾಜಸ್ತಾನದ ಬಾರ್ಮರ್ ಐಬಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಛತ್ತೀಸ್ ಘಡದಲ್ಲಿ ಆಂಟಿ ನಕ್ಸಲ್ ಆಪರೇಷನ್ ಸೆಲ್ ನಲ್ಲಿಯೂ ತಮ್ಮದೇ ಛಾಪು ಮೂಡಿಸಿದರು. ಈ ವೇಳೆ ನಕ್ಸಲರು ನೆಲದಲ್ಲಿ ಹೂತಿಟ್ಟಿದ್ದ ಬಾಂಬ್ ಗಳನ್ನು ಯಾವುದೇ ಆಯುಧ ಇಲ್ಲದಿದ್ದರೂ ಪತ್ತೆ ಹಚ್ಚಿದ ಕೀರ್ತಿಗೆ ಭಾಜನರಾಗಿದ್ದರು. ನಕ್ಸಲ್ ಎನ್ ಕೌಂಟರ್ ಮಾಡಿದ್ದಕ್ಕಾಗಿ ಬಿಎಸ್ಎಫ್ ನ ಅತ್ಯುನ್ನತ ಪದವಿ ಡೈರೆಕ್ಟರ್ ಜನರಲ್ ರೆಕಮಂಡೇಶನ್ ರೋಲ್ ನೀಡಿ ಗೌರವಿಸಲಾಗಿತ್ತು.
ಉದನ್ ಪುರದಲ್ಲಿ ಭಾರತೀಯ ಸೈನಿಕರು ರಸ್ತೆ ದಾಟುವ ವೇಳೆ ಬೆಟಾಲಿಯನ್ ನ ಬಾಂಬ್ ಕಳೆದು ಹೋಗಿದ್ದವು. ಆಗ ತಮ್ಮ ಚಾಕಚಕ್ಯತೆಯಿಂದ ಬಾಂಬ್ ಗಳನ್ನು ಹುಡುಕಿಕೊಟ್ಟ ಯೋಧ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
2015ರವರೆಗೆ ಮೂರು ವರ್ಷ ಬಿಸ್ಕಿನ್ ಐಬಿಯಲ್ಲಿ ಕೆಲಸ. ಮತ್ತೆ ಜಮ್ಮು ಕಾಶ್ಮೀರದ ರಜೌರಿಗೆ ಎಲ್ ಒಸಿಗೆ ನೇಮಕವಾದರು. ಬಳಿಕ ಮೂರೂವರೆ ವರ್ಷ ಸೈನ್ಯಕ್ಕೆ ಸೇರ್ಪಡೆಗೊಂಡವರಿಗೆ ಟ್ರೈನಿಂಗ್ ನೀಡುವ ಮೂಲಕ ಸಾವಿರಾರು ಸೈನಿಕರಿಗೆ ಟಿಪ್ಸ್ ಹೇಳಿಕೊಡುವ ಮೂಲಕ ಪ್ರೀತಿಯ ಮೇಸ್ಟ್ರಾಗಿ ಎಲ್ಲರ ಗಮನ ಸೆಳೆದಿದ್ದರು.
2019ರಿಂದ ಶ್ರೀನಗರದಲ್ಲಿ ವಿಐಪಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಸುರೇಶ್ ಅವರ ಸೇವೆ ಪರಿಗಣಿಸಿ ಹವಾಲ್ದಾರ್ ಆಗಿ ಪ್ರಮೋಷನ್ ಕೊಡಲಾಗಿತ್ತು.