ನಗರದಲ್ಲಿ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಆರಂಭ
ದಾವಣಗೆರೆ, ಮಾ.15- ಬ್ಯಾಂಕ್ ಖಾಸಗೀಕರಣ ದೇಶದ ಹಿತಾಸಕ್ತಿಗೆ ಮಾರಕವಾಗಿದ್ದು, ಈ ಕೂಡಲೇ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಒತ್ತಾಯಿಸಿದರು.
ದಾವಣಗೆರೆ ಮಂಡಿಪೇಟೆಯ ಎಸ್‌ಬಿಐ ಮುಂಭಾಗ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಡೆದ ಮತ ಪ್ರದರ್ಶನ ಸಂದರ್ಭದಲ್ಲಿ ಅವರು ಮಾತನಾಡಿದರು.
ಇಂದು ದೇಶದಾದ್ಯಂತ 90 ಸಾವಿರ ಬ್ಯಾಂಕ್ ಶಾಖೆೆಗಳು ಸಂಪೂರ್ಣ ಬಂದ್ ಆಗಿದ್ದು, 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದರು.
ಬ್ಯಾಂಕ್ ಖಾಸಗೀಕರಣ ದೇಶದ ಹಿತಾಸಕ್ತಿಗೆ ಮಾರಕವಾಗಿದ್ದು, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತಂದು ಉದ್ಯೋಗ ಭದ್ರತೆಗೆ ಧಕ್ಕೆ ತರುವುದು ಖಂಡನೀಯ ಎಂದು ಹೇಳಿದರು.
ದೇಶದ ಅರ್ಥ ವ್ಯವಸ್ಥೆಯ ಜೀವನಾಡಿಗಳಾದ ಸಾರ್ವಜನಿಕ ವಲಯದ ಬ್ಯಾಂಕುಗಳು ಸರ್ಕಾರದ ಅಧೀನದಲ್ಲಿಯೇ ನಡೆಯಬೇಕೇ ಹೊರತು ಖಾಸಗಿ ಬಂಡವಾಳ ಶಾಹಿಗಳ ಮೂಲಕ ಅಲ್ಲ ಎಂದರು.
ಜನಸಾಮಾನ್ಯರ 147 ಲಕ್ಷ ಕೋಟಿ ರೂ. ಠೇವಣಿ ಹಣ ಸಾರ್ವಜನಿಕ ಬ್ಯಾಂಕುಗಳಲ್ಲಿದೆ. ಇದನ್ನು ರಕ್ಷಣೆ ಮಾಡಬೇಕೆ? ಅಥವಾ ಬ್ಯಾಂಕುಗಳನ್ನು ಖಾಸಗಿ ವ್ಯಕ್ತಿಗಳಿಗೊಪ್ಪಿಸಿ ಲೂಟಿ ಮಾಡಲು ಬಿಡಬೇಕೆ? ಎಂದು ಪ್ರಶ್ನಿಸಿದರು.
1969 ರ ಬ್ಯಾಂಕ್ ರಾಷ್ಟ್ರೀಕರಣದ ಪೂರ್ವದಲ್ಲಿ 550 ಖಾಸಗಿ ಬ್ಯಾಂಕುಗಳು ಹಾಗೂ ನಂತರದಲ್ಲಿ 38 ಖಾಸಗಿ ಬ್ಯಾಂಕುಗಳು ಮುಳುಗಡೆಯಾಗಿವೆ.
ಆದರೆ, ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ. ಸಾರ್ವಜನಿಕ ಬ್ಯಾಂಕುಗಳು ದೇಶದ ಆಸ್ತಿ. ಇವನ್ನು ರಕ್ಷಿಸಬೇಕು, ಬೆಳೆಸಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ರಾಷ್ಟ್ರೀಕರಣ ನೀತಿ ಕೈಬಿಟ್ಟು ಖಾಸಗೀಕರಣ ಮಂತ್ರ ಜಪಿಸುತ್ತಿದ್ದು, 1969 ರ ಬ್ಯಾಂಕ್ ರಾಷ್ಟ್ರೀಕರಣದ ಪೂರ್ವದಲ್ಲಿ ಬ್ಯಾಂಕುಗಳ ಸ್ಥಿತಿಗತಿಗಳು ಹೇಗಿದ್ದವು ಮತ್ತು ಇಂದು ಬ್ಯಾಂಕುಗಳ ಸ್ಥಿತಿ ಹೇಗಿವೆ ಎಂಬುದನ್ನು ಸರ್ಕಾರ ತುಲನೆ ಮಾಡಿದರೆ ಪರಿಸ್ಥಿತಿ ಅರಿವಾಗಲಿದೆ ಎಂದರು.
ನಿರುದ್ಯೋಗ ಮತ್ತು ಬಡತನ ನಿವಾರಣೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿವೆ.
ಬ್ಯಾಂಕಿಂಗ್ ಸೌಲಭ್ಯವು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು. ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಬಲಗೊಳ್ಳಬೇಕಾಗಿದೆ ಎಂದು ಹೇಳಿದರು.
ಸಂಘಟನೆಯ ಪ್ರಮುಖರಾದ ಕೆ.ಎನ್. ಗಿರಿರಾಜ್, ಕೆ. ವಿಶ್ವನಾಥ ಬಿಲ್ಲವ, ಬಿ. ಆನಂದಮೂರ್ತಿ, ಎಂ.ಎಸ್. ವಾಗೀಶ್, ಎಸ್. ನಾಗರಾಜ್ ಮತ್ತಿತರರು ಬ್ಯಾಂಕ್ ವಿರೋಧಿ ನೀತಿ ಖಂಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಚ್.ಜಿ. ಸುರೇಶ್, ಹೆಚ್.ಎಸ್. ತಿಪ್ಪೇಸ್ವಾಮಿ, ಕೆ. ಶಶಿಶೇಖರ್, ಎಂ.ಐ. ಕಿರಣಕುಮಾರ್, ಎಂ.ಎಸ್. ವಾಗೀಶ್, ಎನ್. ರಾಮಮೂರ್ತಿ, ಪಿ.ಆರ್. ಪುರುಷೋತ್ತಮ, ಎಸ್. ಪ್ರಶಾಂತ್, ಅನಿಲ್‌ಕುಮಾರ್, ಕಾಡಜ್ಜಿ ವೀರಪ್ಪ, ಕೆ. ರವಿಶಂಕರ್, ನಾಗವೇಣಿ ನರೇಂದ್ರ
ಕುಮಾರ್, ಅಜಯ್‌ಕುಮಾರ್, ಸುರೇಶ್ ಚೌವ್ಹಾಣ್, ರಮೇಶ್, ಶಿವಮೂರ್ತಿ ಪೂಜಾರ್, ಎಂ.ಎಂ. ಸಿದ್ದವೀರಯ್ಯಸ್ವಾಮಿ, ಡಿ.ಎ. ಸಾಕಮ್ಮ, ಶ್ವೇತಾ ಬಿ.ಎನ್.,
ನಿತ್ಯಾನಂದ ಡೊಂಗ್ರೆ, ರಾಮಕೃಷ್ಣ, ದುರುಗಪ್ಪ ಸಿ, ಸಿ.ಹೆಚ್.ಎಂ. ದೀಪಾ, ಎಸ್. ಪ್ರಶಾಂತ್, ಸುರೇಶ್ ಜೋಳದಾಳ್, ಅಬ್ಬಾರ್ ಅಹಮದ್, ದರ್ಶನ್, ಸಿದ್ದಲಿಂಗಸ್ವಾಮಿ, ಕೆ.ಹೆಚ್. ದಪ್ಪೇರ್, ಟಿ. ಸುಭಾಶ್ಚಂದ್ರ, ನಾಗೇಶ್ವರಿ ಆರ್. ನಾಯರಿ, ವಿರೂಪಾಕ್ಷಯ್ಯ, ಮೊಹಮ್ಮದ್ ರಫೀ, ಸುನೀತ, ವಿ. ನಂಜುಂಡೇಶ್ವರ, ಅಜಿತ್‌ಕುಮಾರ್
ನ್ಯಾಮತಿ, ಹೆಚ್. ಸುಶೀಲಮ್ಮ, ಜಿ.ಬಿ. ಶಿವಕುಮಾರ್, ಜೆ.ಒ. ಮಹೇಶ್ವರಪ್ಪ, ಗುರುರಾಜ್ ಭಾಗವತ್ ಮತ್ತಿತರರು ಪಾಲ್ಗೊಂಡಿದ್ದರು.