ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ಕಾರ್ಮಿಕರ ಪ್ರತಿಭಟನೆ

ದಾವಣಗೆರೆ, ಮಾ.15- ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಕಾರ್ಮಿಕರಿಗೆ ನವೆಂಬರ್ ತಿಂಗಳಿನಿಂದ ವೇತನ ಪಾವತಿಸದಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ (ಎಐಯುಟಿಯುಸಿ)ದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಅಡುಗೆ ಎಣ್ಣೆ, ಬೇಳೆ ಕಾಳುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಅಡುಗೆ ಅನಿಲ ಎಲ್ ಪಿ ಜಿ ಸಬ್ಸಿಡಿ ರದ್ಧತಿಯನ್ನು ವಾಪಸ್ ಪಡೆಯಬೇಕು. ಪೆಟ್ರೋಲ್-ಡೀಸೆಲ್‍ಗಳ ತೆರಿಗೆಯನ್ನು ಕೈಬಿಟ್ಟು ಜನಸಾಮಾನ್ಯರ ಕೈಗೆಟಕುವಂತೆ ಅವುಗಳ ಬೆಲೆಯನ್ನು ನಿಗದಿಪಡಿಸಬೇಕು. ಪಡಿತರ ವಿತರಣೆಯಲ್ಲಿ ದವಸ-ಧಾನ್ಯಗಳ ಪ್ರಮಾಣವನ್ನು ಕಡಿತ ಮಾಡಬಾರದು. ಕುಟುಂಬಗಳ ಅಗತ್ಯಕ್ಕನುಗುಣವಾಗಿ ಸಮರ್ಪಕ ಪ್ರಮಾಣದಲ್ಲಿ ಪಡಿತರವನ್ನು ಒದಗಿಸಬೇಕು. ಅಂಗವಿಕಲರ, ವಿಧವೆಯರ, ವಯೋವೃದ್ಧರ ಮಾಸಿಕ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಿ ತಡ ಮಾಡದೆ ಪಾವತಿಸಲು ವ್ಯವಸ್ಥೆ ಮಾಡಬೇಕು. ರೈಲು ಓಡಾಟವನ್ನು ಸಹಜ ಸ್ಥಿತಿಗೆ ಮರಳಿಸಿ ಬಡವರ ಓಡಾಟಕ್ಕೆ ಅನುಕೂಲವಾಗುವಂತೆ ಪ್ಯಾಸೆಂಜರ್ ರೈಲನ್ನು ಕೂಡಲೇ ಪುನರಾರಂಭಿಸಬೇಕು. ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದ ವಸತಿ ಹೀನರಿಗೆ ಪುನರ್ವಸತಿ ಕಲ್ಪಿಸಲು ಸೂಕ್ತ ನೀತಿಯನ್ನು ರೂಪಿಸಬೇಕು. ಕೋವಿಡ್ ಮುಂಚೂಣಿ ಯೋಧರು ಎಂದು ಕರೆಯಲ್ಪಟ್ಟ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಸ್ಕೀಮ್ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕಾರ್ಪೊರೇಟ್ ಕಂಪನಿಗಳನ್ನು ಉದ್ಧಾರ ಮಾಡುವ, ರೈತರನ್ನು ಬೀದಿಗೆ ತಳ್ಳುವ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ಶಕ್ತಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ರಾಜ್ಯದಲ್ಲಿ ಅನುಷ್ಠಾನಗೊಳಿ ಸಬಾರದು. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಕಾರ್ಮಿಕ ಸಂಹಿತೆಗಳ ಜಾರಿಯನ್ನು ಕೈ ಬಿಡಬೇಕು ಹಾಗೂ ಈಗಾಗಲೇ ಅನು ಷ್ಠಾನದಲ್ಲಿರುವ ಕಾರ್ಮಿಕ ಕಾಯ್ದೆಗಳನ್ನು ಎಂದಿನಂತೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್‍ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಕಾರ್ಯದರ್ಶಿ ಸ್ವಾಮಿ ನಿಂಗಪ್ಪ, ಶಿವಾಜಿರಾವ್ ಢಗೆ, ಸಂಘಟನೆಯ ಕಾರ್ಮಿಕ ನಾಯಕರುಗಳಾದ ಮಂಜುಳಮ್ಮ, ಹನುಮಂತಪ್ಪ, ರಾಮಣ್ಣ, ಮಹೇಶ್, ಸುಮಾ,  ಯತೀಶ್, ರಾಮೇಶ್ವರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!