ಪಾಲಿಕೆ, ಕಂದಾಯ, ಪೊಲೀಸ್ ಅಧಿಕಾರಿಗಳ ಬಿಗಿ ಕ್ರಮ
ದಾವಣಗೆರೆ, ಮೇ 21- ಜಿಲ್ಲಾಡಳಿತ ಬಿಗಿ ನಿಯಮ, ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಹೇರಿದ್ದರೂ ಸಹ ಕುಂಟುನೆಪ ಹೇಳಿಕೊಂಡು ಪದೇಪದೇ ಮನೆಯಿಂದ ಹೊರಗೆ ಬಂದು ತರಕಾರಿ, ಸೊಪ್ಪು, ಔಷಧಿ, ಆಸ್ಪತ್ರೆ ಎಂದು ಹೇಳಿಕೊಂಡು ಸುಖಾಸುಮ್ಮನೇ ಓಡಾಡುತ್ತಿದ್ದ ಜನರಿಗೆ ಬ್ರೇಕ್ ಬಿದ್ದಂತಾಗಿದೆ.
ಇಂದು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತದಿಂದ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ತದನಂತರ ಎಲ್ಲವನ್ನೂ ಬಂದ್ ಮಾಡಿಸಿತ್ತು. 10 ಗಂಟೆಯಿಂದಲೇ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಗಳು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೇ ಸಣ್ಣ ರಸ್ತೆಗಳಲ್ಲಿ ಸಂಚರಿಸಿ ಅಲ್ಲಲ್ಲಿ ತೆರೆದಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಮುಚ್ಚಿಸಲು ಸೂಚನೆ ನೀಡಿದರು. ಅಲ್ಲದೇ ಶನಿವಾರದಿಂದ ಸೋಮವಾರದ ಬೆಳಿಗ್ಗೆವರೆಗೂ ಯಾವುದೇ ಕಾರಣಕ್ಕೂ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದರು.
ಇನ್ನು ನಗರದ ಕೆಲವು ಪ್ರಮುಖ ರಸ್ತೆಗಳು, ವೃತ್ತದಲ್ಲಿ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ, ಪಾಲಿಕೆ ಸಿಬ್ಬಂದಿಗಳು ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟರು. ಇನ್ನು ವಾಗ್ವಾದಕ್ಕೆ ಇಳಿದ ಕೆಲವರಿಗೆ ಲಾಠಿ ರುಚಿ ಬದಲು ಕೈ ರುಚಿ ತೋರಿಸಿ, ತಿಳುವಳಿಕೆ ನೀಡಿ ಬಿಟ್ಟರು. ಆದರೂ ಜನತೆ ಸುಖಾ ಸುಮ್ಮನೆ ಓಡಾಡುತ್ತಿದ್ದ ಬಗ್ಗೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.
ಮನೆಯಿಂದ ಬೇಕಾಬಿಟ್ಟಿ ಹೊರಗೆ ಬರಬೇಡಿ, ಕೊರೊನಾ ಹಚ್ಚಿಕೊಂಡು ನೀವೂ ಸಾಯ ಬೇಡಿ, ನಿಮ್ಮವರನ್ನೂ ಸಾಯಿಸಬೇಡಿ, ನಿಮ್ಮನ್ನು ನಂಬಿಕೊಂಡವರನ್ನು ಅನಾಥರನ್ನಾಗಿ ಮಾಡಬೇಡಿ, ಸತ್ತರೆ ನಿಮಗೆ ಕೊಳ್ಳಿ ಇಡಲು ಅಥವಾ ಮಣ್ಣು ಮಾಡಲು ನಿಮ್ಮವರೇ ಇಲ್ಲದ ಪರಿಸ್ಥಿತಿ ಎದುರಾಗುತ್ತದೆ ಎಂದು ಮುನ್ನೆಚರಿಸಿದರು.