ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಪರಿಣಾಮಕಾರಿ ತಂತ್ರ
ಶೀತ, ಕೆಮ್ಮು, ಮೈ ಕೈ ನೋವಿನಂತಹ ಪ್ರಕರಣಗಳಿಗೂ ಕೋವಿಡ್ ಟೆಸ್ಟ್
ದಾವಣಗೆರೆ, ಮಾ.15- ಕೊರೊನಾ ನಿಯಂತ್ರಣ ಹಿನ್ನೆಲೆ ಯಲ್ಲಿ ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ನಿಯಮಾನುಸಾರ ಎಫ್ಐಆರ್ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಲಸಿಕಾಕರಣ ಪ್ರಗತಿ ಮತ್ತು ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾ ಯುದ್ದ ಇನ್ನೂ ಮುಗಿದಿಲ್ಲ. ಜನರು ಮೈಮರೆತು ಮದುವೆ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಸೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಜನರು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬದುಕುವ ರೀತಿ ನೋಡುತ್ತಿದ್ದರೆ ಎರಡನೇ ಅಲೆ ದೂರವಿಲ್ಲ ಎನ್ನಿಸುತ್ತಿದೆ. ಸರ್ಕಾರ ಕೂಡ ಈ ಹಿನ್ನೆಲೆಯಲ್ಲಿ ಮೊದಲಿನಂತೆ ಮದುವೆ, ಜಾತ್ರೆ, ಇತರೆ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಮತ್ತು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದರೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡಿದೆ. ಈ ಸುತ್ತೋಲೆಯನ್ನು ಸಂಬಂಧಿಸಿದವರಿಗೆ ನೀಡಿ ಜಾರಿ ಮಾಡ ಲಾಗುತ್ತಿದ್ದು, ನಿಯಮ ಮೀರಿದರೆ ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೊನಾ ಪರೀಕ್ಷೆ ಸಂಖ್ಯೆ ಮತ್ತು ಲಸಿಕಾಕರಣವನ್ನು ಹೆಚ್ಚಿಸಲು ಜನರಲ್ಲಿ ಅರಿವು ಮೂಡಿಸಲು ಐಇಸಿ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಗೆ ಪ್ರತಿದಿನ 2800 ಟೆಸ್ಟ್ ಗುರಿ ನೀಡಲಾಗಿದ್ದರೂ ಅಷ್ಟು ಪ್ರಗತಿ ಇಲ್ಲ. ಆದ್ದರಿಂದ ಇನ್ನು ಮುಂದೆ ನೀಡಿರುವ ಗುರಿ ಜೊತೆಗೆ 100 ಹೆಚ್ಚುವರಿ ಟೆಸ್ಟ್ ಮಾಡಬೇಕು. ದಾವಣಗೆರೆ ತಾಲ್ಲೂಕಿಗೆ 1000, ಹೊನ್ನಾಳಿ ಮತ್ತು ಹರಿಹರ ತಲಾ 375, ಜಗಳೂರು 300 ಮತ್ತು ಚನ್ನಗಿರಿ 450 ಟೆಸ್ಟ್ ಜೊತೆಗೆ ಹೆಚ್ಚುವರಿ 100 ಟೆಸ್ಟ್ ಮಾಡಬೇಕು. ಹಾಗೂ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಮಾಡಬೇಕು ಎಂದು ಸೂಚಿಸಿದರು. ಎಸ್ಪಿ ಹನುಮಂತರಾಯ ಮಾತನಾಡಿ, ತಹಶೀಲ್ದಾರರು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಇತರೆ ಜನ ಸೇರುವ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮಾವಳಿಯನ್ನು ಪಾಲಿಸಬೇಕು. ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಸಭೆ ಕರೆದು ನಡಾವಳಿ ಸಿದ್ದಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರರಾದ ಗಿರೀಶ್, ಡಾ.ನಾಗವೇಣಿ, ರಾಮಚಂದ್ರಪ್ಪ, ಬಸವನಗೌಡ, ಆರ್ಸಿಹೆಚ್ಓ ಡಾ.ಮೀನಾಕ್ಷಿ, ಡಿಎಸ್ಓ ಡಾ.ರಾಘವನ್, ಟಿಹೆಚ್ಓ ಡಾ.ವೆಂಕಟೇಶ್ ಇತರರಿದ್ದರು.
ಚನ್ನಗಿರಿಯಲ್ಲಿ ಗ್ರಾಮ ವಾಸ್ತವ್ಯ : ಡಿಸಿ, ಸಿಇಓ ಮತ್ತು ಎಸ್ಪಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಮಾ. 20 ರ ಶನಿವಾರ ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಹೊರ ಜಿಲ್ಲೆ, ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ಬೀಳಗಿ
ದಾವಣಗೆರೆ, ಮಾ. 15- ಕೊರೊನಾ ಎರಡನೇ ಅಲೆಯು ಉಲ್ಭಣಗೊಳ್ಳುವ ಎಲ್ಲಾ ಸಾಧ್ಯತೆಗಳಿರುವುದರಿಂದ, ವಿದೇಶ, ಅಂತರ ರಾಜ್ಯ ಹಾಗೂ ರಾಜ್ಯದ ಗಡಿ ಭಾಗಗಳ ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದ್ದಾರೆ.
ವಿದೇಶ, ಅಂತರ ರಾಜ್ಯ ಹಾಗೂ ರಾಜ್ಯದ ಗಡಿ ಭಾಗಗಳ ಜಿಲ್ಲೆಗಳಾದ ಬೆಂಗಳೂರು, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಕಾರವಾರ, ಮೈಸೂರು, ಬೀದರ್, ಕಲಬುರ್ಗಿ, ಕೊಡಗು ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಪರೀಕ್ಷೆಯನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ನಗರ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಡಲಾಗುವುದು ಎಂದರು.
ಜಿಲ್ಲೆಯ ನಗರ ಮತ್ತು ಗ್ರಾಮಗಳ ನಿವಾಸಿಗಳು ಹೊರ ಜಿಲ್ಲೆಗಳಿಂದ ಆಗಮಿಸಿದ್ದಲ್ಲಿ ಅಂತಹವರ ಮಾಹಿತಿಯನ್ನು ಕೋವಿಡ್-19 ವಾರ್ ರೂಂ. ಸಂಖ್ಯೆ. 8951539500ಕ್ಕೆ ಮಾಹಿತಿ ನೀಡಲು ಮನವಿ ಮಾಡಿದರು.
ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು ಇದನ್ನು ಉಲ್ಲಂಘಿಸಿದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಅಂತಹವರ ಮೇಲೆ ಎಫ್.ಐ.ಆರ್ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.