ದಾವಣಗೆರೆ, ಮಾ.15- ಪ್ರಸಕ್ತ ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳ ಈಡೇರಿಸದಿರುವುದನ್ನು ಖಂಡಿಸಿ ನಗರದಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮುಖಾಂತರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಆಗಮಿಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಸೇವಾ ಹಿರಿತನದ ಆಧಾರದಲ್ಲಿ ಗೌರವ ಧನ ಹೆಚ್ಚಳ ಮಾಡುವುದು, ಸುದೀರ್ಘ ಸೇವೆ ಸಲ್ಲಿಸಿದವರಿಗೆ ಗೋವಾ ರಾಜ್ಯದ ಮಾದರಿಯನ್ನು (ಮಾರ್ಪಾಟುಗಳೊಂದಿಗೆ) ಜಾರಿ ಮಾಡುವುದು, ತಪ್ಪಿದಲ್ಲಿ ಎಲ್ಲರಿಗೂ ಒಪ್ಪುವಂತಹ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗದಿಪಡಿಸಿದರೆ ಅವರವರ ಸೇವಾವಧಿಗನುಗುಣವಾಗಿ ಸೌಲಭ್ಯ ಸಿಗಲಿದೆ. ಆದ್ದರಿಂದ ದೀರ್ಘ ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಗಲಿದೆ. 2015ರ ನಂತರ ನಿವೃತ್ತಿಯಾದ 7294 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು ಹಾಗೂ ನಿವೃತ್ತ ಕಾರ್ಯಕರ್ತೆ ತಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ 5 ಸಾವಿರ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕು. ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಇಎಸ್ಐ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳಲ್ಲೇ ಎಲ್.ಕೆ.ಜಿ-ಯು.ಕೆ.ಜಿಯನ್ನು ಆರಂಭಿಸಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು, ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿ ಯರನ್ನು ನೇಮಕ ಮಾಡುವವರೆಗೂ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ತಯಾರಿಸುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಿನಿ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರ ಗೌರವ ಧನದ ಅಂತರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಲು ಇಲಾಖೆಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಯಾವುದೇ ಬೇಡಿಕೆಯನ್ನು ಬಜೆಟ್‌ನಲ್ಲಿ ಈಡೇರಿಸಿಲ್ಲ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವವರೆಗೂ ಇ-ಸಮೀಕ್ಷಾ ಆಪ್‌ನಲ್ಲಿ ಪ್ರಥಮವಾಗಿ ಬಿಪಿಎಲ್ ಕಾರ್ಡ್ ಆಧರಿಸಿ ಸರ್ವೆ, ಬಿಎಲ್ಒ ಸರ್ವೆ, ಕೊರೊನಾ ಸರ್ವೆ, ಪೋಷಣ್ ಟ್ರ್ಯಾಕ್, ಆರೋಗ್ಯ ಇಲಾಖೆ ಸರ್ವೆ, ಮನೆ ಮನೆ ಸಮೀಕ್ಷೆ, ಭಾಗ್ಯಲಕ್ಷ್ಮಿ ಅರ್ಜಿ, ಮಾತೃವಂದನಾ ಅರ್ಜಿ, ಎಂಪಿಆರ್ ಇನ್ನಿತರೆ ಯಾವುದೇ ವರದಿಯನ್ನು ಅಂಗನವಾಡಿ ಇಲಾಖೆ ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸುವವರೆಗೂ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರಲ್ಲದೇ, ಸರ್ಕಾರವು ಈಗಲಾದರೂ ಬೇಡಿಕೆಗಳನ್ನು ಪ್ರಸಕ್ತ ಅಧಿವೇಶನದಲ್ಲಿ ಈಡೇರಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಆವರಗೆರೆ ಚಂದ್ರು, ಕಾರ್ಯದರ್ಶಿ
ಎನ್. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಎಂ.ಬಿ. ಶಾರದಮ್ಮ, ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ,
ಕೆ. ಸುಧಾ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕಿಯರು ಭಾಗವಹಿಸಿದ್ದರು.