ಬೆಳ್ಳಂಬೆಳಿಗ್ಗೆ ಕೊಳ್ಳಲು ಮುಗಿ ಬಿದ್ದ ಜನತೆ

ದಾವಣಗೆರೆ, ಮೇ 21- ಇಂದು ಬೆಳಿಗ್ಗೆಯಿಂದ ಸೋಮವಾರದ ಬೆಳಿಗ್ಗೆವರೆಗೂ ಜಿಲ್ಲಾಡಳಿತ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದ ಬೆನ್ನಲ್ಲೇ ಜನತೆ ಶುಕ್ರವಾರ ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿನ ದಿನಸಿ ಅಂಗಡಿಗಳು, ತರಕಾರಿ, ಸೊಪ್ಪು, ಚಿಕನ್, ಮಟನ್, ಮೀನು, ಮೊಟ್ಟೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ನಾ ಮುಂದು, ತಾ ಮುಂದು ಎನ್ನುವಂತೆ ನಿಂತಿದ್ದರು.

ಇನ್ನು ಅಂಗಡಿಯವರೂ ಸಹ ತಮ್ಮ ವ್ಯಾಪಾರ ಕೇಂದ್ರಗಳ ಮುಂದೆ ನಿಂತಿದ್ದ ಗ್ರಾಹಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳದೇ ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡುವಲ್ಲಿ ನಿರತರಾಗಿದ್ದರು. ಯಾವುದೇ ಕಡೆಗಳಲ್ಲೂ ಸೋಂಕು ನಿವಾರಕ ದ್ರಾವಣ ಕಂಡು ಬರಲಿಲ್ಲ.

ಇದಲ್ಲದೇ ಜನರು ಲಾಕ್‍ಡೌನ್  ನೋಡಲೆಂದೇ ತಮಗೆ ಸೋಂಕು ಹರಡುತ್ತದೇ ಎನ್ನುವುದನ್ನೇ ಮರೆತು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದರು. ಸುಖಾಸುಮ್ಮನೆ ನಿಂತು ಹರಟೆ ಹೊಡೆಯುವಲ್ಲಿ ನಿರತರಾಗಿದ್ದರು. ಗಂಟೆಗಟ್ಟಲೇ ಮಾತನಾಡುತ್ತಾ ನಿಂತಿದ್ದರು. ಆದರೆ 10ಗಂಟೆ ಹತ್ತಿರ ಆಗುತ್ತಿದ್ದಂತೆ ಎಚ್ಚರಿಕೆ ಗಂಟೆ ಹೊಡೆದವರಂತೆ ಆತುರದಿಂದಲೇ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಇನ್ನು ರಸ್ತೆಯಲ್ಲಿ ವಾಹನಗಳ ಸಂಚಾರವೂ ಸಹ ಹೆಚ್ಚಾಗಿ ಕಂಡು ಬಂತು, ನಂತರ ಕಡಿಮೆ ಆಯಿತು.

10ರ ನಂತರ ಬಿಕೋ ಎನ್ನುತ್ತಿದ್ದ ರಸ್ತೆಗಳು: ಲಾಕ್‍ಡೌನ್ ಹಿನ್ನೆಲೆಯ್ಲಲಿ ಪ್ರತಿನಿತ್ಯ ಬೆಳಿಗ್ಗೆ ಜನ ಜಂಗುಳಿಯಿಂದ ಇರುತ್ತಿದ್ದ ರಸ್ತೆಗಳು 10ಗಂಟೆಯ ನಂತರ ಬಿಕೋ ಎನ್ನುತ್ತಿದ್ದವು. ಮನೆಯಿಂದ ಆಚೆ ಬಂದು ಸುಖಾಸುಮ್ಮನೆ ವಾಹನಗಳಲ್ಲಿ ಓಡಾಡಿದರೆ ಕೇಸು ಬೀಳಬಹುದೆಂಬ ಭೀತಿ, ಅಲ್ಲದೇ ತಮಗೆ ಬೀಳಬಹುದಾದ ದಂಡ ಇತ್ಯಾದಿ ಕಾರಣಗಳಿಂದ ಬೆದರಿದ ಸಾರ್ವಜನಿಕರು ನಗರದ ಬಹುತೇಕ ಕಡೆ ಮನೆಯಿಂದ ಹೊರ ಬಾರದೆ ತಮಗೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್‍ಡೌನ್ ಜಾರಿಯಲ್ಲಿದ್ದರೂ ಅಷ್ಟಿಷ್ಟು ಜನರಿಂದ ಇರುತ್ತಿದ್ದ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಕೆ.ಆರ್.ಮಾರುಕಟ್ಟೆ, ಎಪಿಎಂಸಿ, ಹಳೇ ದಾವಣಗೆರೆಯ ಕೆಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು. ಇದಲ್ಲದೇ ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಕಂದಾಯ ಇಲಾಖೆ, ಪಾಲಿಕೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅನಗತ್ಯವಾಗಿ ಓಡಾಟ ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ನಗರದ ಎಲ್ಲಾ ವೃತ್ತಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ದ್ವಿಪಥ ರಸ್ತೆಗಳನ್ನು ಬಂದ್ ಮಾಡಿ ಕೇವಲ ಏಕಮುಖವಾಗಿ ಸಂಚರಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗುತ್ತಿತ್ತು. ಯಾವುದೇ ವೃತ್ತಗಳಲ್ಲಿ ಪೊಲೀಸರು ಕಂಡು ಬರಲಿಲ್ಲ.

ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ಗಂಟೆಯೊಳಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಾರ್ವಜನಿಕರು ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ತಮ್ಮ ಮನೆಗಳತ್ತ ಸಾಗಿದರು. ನಗರದ ಕೆಎಸ್‍ಆ ರ್ಟಿಸಿ ಬಸ್‍ನಿಲ್ದಾಣ, ಖಾಸಗಿ ಬಸ್‍ನಿಲ್ದಾಣ, ಮಾರುಕಟ್ಟೆ ಪ್ರದೇಶಗಳು, ಆಟೋನಿಲ್ದಾಣಗಳು ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. 

error: Content is protected !!