ಮಲೇಬೆನ್ನೂರು, ಆ.1- ಬಿ.ಎಸ್. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದ ರೀತಿ ಎಲ್ಲರಿಗೂ ಬಹಳ ಬೇಸರ ತಂದಿದ್ದು, ಇದರ ಪರಿಣಾಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಅನುಭವಿಸಲಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.
ಭಾನುವಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ನಂತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೋಮುವಾದ ತಾಂಡವವಾಡುತ್ತಿದ್ದು, ಅಸ್ಥಿರ ಆಡಳಿತದಿಂದ ದೇಶ ಹಾಗೂ ರಾಜ್ಯದ ಜನ ಬೇಸತ್ತಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಅವರು ಹೇಳಿದರು.
ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಸಿದ್ಧರಾಗಿದ್ದಾರೆ. ಕುಮಾರಸ್ವಾಮಿ ಅವರು ಅವಕಾಶ ಸಿಕ್ಕ ಎರಡು ಬಾರಿಯೂ ರಾಜ್ಯದ ಜನ ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸ ಮಾಡಿದ್ದಾರೆ. ಅವರ ಆಡಳಿತವನ್ನು ರಾಜ್ಯದ ಜನ ಮತ್ತೆ ಬಯಸಿದ್ದು, 2023 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಿವಶಂಕರ್, ನನಗೆ ಹಣ ಮಾಡುವ ಹಪಾಹಪಿ ಇಲ್ಲ. ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದರು.
ಹರಿಹರ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಏನಿದೆ ಎಂಬುದು ಜನರಿಗೆ ಗೊತ್ತಿದೆ. ಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ. ವಿಧಾನಸಭೆ ಚುನಾವಣೆಯಲ್ಲೂ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಜನ ಕಾತುರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಜನ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು.
ಜನತಾದಳದಲ್ಲಿ ಬೆಳೆದವರು ಅವರ ಆಡಳಿತ ಕೂಡಾ ಅದೇ ಮಾದರಿಯಲ್ಲಿರಬೇಕು. ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಆಡಳಿತ ನಡೆಸುತ್ತಾರೆಂಬ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಎಲ್ಲಾ ವರ್ಗಗಳ ಜನರ ಹಿತ ಕಾಯುವ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಬಯಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹರಿಹರ ತಾಲ್ಲೂಕು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಹೆಚ್.ಜಿ. ಪರಮೇಶ್ವರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಸಿರಿಗೆರೆ ಪರಮೇಶ್ವರ ಗೌಡ, ಎಂ. ಮುರುಗೇಶಪ್ಪ, ಕೆ.ಜಿ. ಕೊಟ್ರೇಶಪ್ಪ, ಜಿಗಳಿಯ ಕೆ.ಆರ್. ರಂಗಪ್ಪ, ಕೆ.ಎನ್. ಹಳ್ಳಿಯ ಜಿ. ಅಶೋಕ್, ನಿವೃತ್ತ ಶಿಕ್ಷಕ ನಿಂಗಪ್ಪ, ಗುರುಮೂರ್ತೆಪ್ಪ, ಯಲ್ಲಪ್ಪ ರೆಡ್ಡಿ, ದೊಗ್ಗಳ್ಳಿ ಮಹೇಶ್, ಕೆ.ಜಿ. ಸುರೇಂದ್ರ, ಧನಂಜಯ, ಬಸವರಾಜಪ್ಪ, ಮಲೇಬೆನ್ನೂರಿನ ಹೊಸಳ್ಳಿ ಕರಿಬಸಪ್ಪ ಇನ್ನಿತರರಿದ್ದರು.