ಕೊರೊನಾ ತಡೆಗೆ ಸೋಮವಾರದವರೆಗೆ ಮೂರು ದಿನ ಕಠಿಣ ಕ್ರಮ
ದಾವಣಗೆರೆ, ಮೇ 20- ಕೊರೊನಾ ನಿಯಂತ್ರಿಸಲು ಇಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮೇ 24 ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು ಮೂರು ದಿನ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ 24 ರ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟಲು ಮೂರು ದಿನಗಳ ಕಾಲ ಜಾರಿಗೊಳಿಸಿರುವ ಸಂಪೂರ್ಣ ಲಾಕ್‍ಡೌನ್‍ಗೆ ಸಹಕರಿಸಲು ಸಾರ್ವಜನಿಕರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿ ರುತ್ತದೆ. ಎಲ್ಲಾ ರೀತಿಯ ಮದ್ಯದಂಗಡಿ ಗಳನ್ನು ಮತ್ತು ಬಾರ್‍ಗಳನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿರುತ್ತದೆ.
ಜಿಲ್ಲೆಗೆ ಆಗಮಿಸುವವರನ್ನು ಪ್ರತಿ ಚೆಕ್ ಪೋಸ್ಟ್‍ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳ ಲಾಗುವುದು. ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.
ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆ ಗಳನ್ನು ಚೆಕ್ ಪೋಸ್ಟ್‍ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್‍ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ ಇದೆ. ಯಾವುದೇ ರೀತಿಯ ಪಾರ್ಸಲ್‌ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿಲ್ಲ.
ಹಾಲು, ಡೈರಿ ಹಾಗೂ ಹಾಲಿನ ಬೂತ್‌ಗಳು ಮತ್ತು ಮೊಟ್ಟೆ ಅಂಗಡಿಗಳು ಮಾತ್ರ ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ ಬೆಳಿಗ್ಗೆ 10.00 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ.
ನಿಷೇಧ: ಎಲ್ಲ ಅಂಗಡಿ ಮುಂಗಟ್ಟು, ವಾಣಿಜ್ಯ, ಕೈಗಾರಿಕಾ ಚಟುವಟಿಕೆ, ವಾಹನ ಸಂಚಾರಕ್ಕೆ ಅವಕಾಶವಿಲ್ಲ
ಕಿರಾಣಿ ಅಂಗಡಿ, ದಿನಸಿ, ಹಣ್ಣು ತರಕಾರಿ, ಮಾಂಸ – ಮೀನು ಹಾಗೂ ಹಣ್ಣು – ತರಕಾರಿ ಮಾರುಕಟ್ಟೆ,
ಮದ್ಯದಂಗಡಿ ಹಾಗೂ ಬಾರ್ ನಿಷೇಧ.
ಅನುಮತಿ : ಹೋಟೆಲ್ಗಳ ಪಾರ್ಸಲ್ ಸೇವೆ, ಕೋವಿಡ್ ಕಾರ್ಯಕ್ಕೆ ನಿಯೋಜಿಸಿದ ಕಚೇರಿಗಳು
ಹಾಲು, ಡೈರಿ, ಹಾಲಿನ ಬೂತ್, ಮೊಟ್ಟೆ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ 10ರವರೆಗೆ. ಔಷಧಿ ಅಂಗಡಿಗಳು, ಆಂಬ್ಯುಲೆನ್ಸ್, ತುರ್ತು ವೈದ್ಯಕೀಯ ಸೇವೆ, ವಿದ್ಯುತ್, ಪೆಟ್ರೋಲ್ ಪಂಪ್, ನೀರು – ನೈರ್ಮಲ್ಯ ಸೇವೆ
ಅಧಿಕೃತ ಪ್ರಯಾಣ ದಾಖಲೆ ಹಾಗೂ ಟಿಕೆಟ್ ತೋರಿಸಿದರೆ ಮಾತ್ರ ಆಟೋ – ಟ್ಯಾಕ್ಸಿ
ಪಡಿತರ ಅಂಗಡಿಗಳು, ಇಂದಿರಾ ಕ್ಯಾಂಟೀನ್, ದಿನಪತ್ರಿಕೆ, ದೃಶ್ಯಮಾಧ್ಯಮ, ಸರಕು ಸಾಗಾಣಿಕೆ ವಾಹನಗಳು
ನಿರ್ಗತಿಕರ ಕೇಂದ್ರ, ವೃದ್ಧಾಶ್ರಮ, ಬಾಲಮಂದಿರ, ಹಾಪ್ಕಾಮ್ಸ್ ಮೂಲಕ ಮನೆ ಬಾಗಿಲಿಗೆ ತರಕಾರಿ – ಹಣ್ಣು, ಅಡುಗೆ ಅನಿಲ ಕಾರ್ಯ ನಿರ್ವಹಣೆ, ಎಪಿಎಂಸಿ ಸಗಟು ಮಾರಾಟ, ಸಾಗಣೆ, ನಿರ್ಮಾಣ ಸ್ಥಳದಲ್ಲೇ ವಾಸವಿರುವ ಕಾರ್ಮಿಕರ ಬಳಸಿ ನಿರ್ಮಾಣ, ಇ – ಕಾಮರ್ಸ್ ಸೇವೆಗಳು, ಮದುವೆಗೆ ಅನುಮತಿ ಪಡೆ ದುಕೊಂಡಿದ್ದರೆ 10 ಜನರಿಗೆ ಮಾತ್ರ ಅವಕಾಶ. ಅಂತ್ಯಸಂಸ್ಕಾರದಲ್ಲಿ 5 ಜನ ಮಾತ್ರ ಪಾಲ್ಗೊಳ್ಳಲು ಅನುಮತಿ
ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಆಂಬುಲೆನ್ಸ್ ಅಗ್ನಿಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ಆಕ್ಸಿಜನ್ ಉತ್ಪಾದನಾ ಘಟಕ, ನೀರು, ನೈರ್ಮಲ್ಯ ಸೇವೆಗಳಿಗೆ ಅನುಮತಿ ಇದೆ.
ಕೊರೊನಾಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಛೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಆದರೆ, ಈ ಕಛೇರಿಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಜಿಲ್ಲೆಯಲ್ಲಿ ಕಛೇರಿ ವೇಳೆಯನ್ನು ಮೀರಿ ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ ನ್ಯಾಯಾಂಗದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸುವುದಕ್ಕೆ ಅನುಮತಿ ಇದೆ.
ಸರ್ಕಾರದ ಆದೇಶದ ಪ್ರಕಾರ ಸರ್ಕಾರೇತರ ಸಂಸ್ಥೆಗಳ ಕಛೇರಿಗಳು, ಇತರೆ ಎಲ್ಲಾ ಕಛೇರಿಗಳ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ತುರ್ತು ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಛೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು.
ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅಧಿಕೃತ ಪ್ರಯಾಣ ದಾಖಲೆ ಹಾಗೂ ಟಿಕೆಟ್‍ಗಳನ್ನು ತೋರಿಸಿದರೆ ಮಾತ್ರ ಸಂಚರಿಸಲು ಅನುಮತಿಸಿದೆ. ಪಡಿತರ ನ್ಯಾಯಬೆಲೆ ಅಂಗಡಿಗಳು ತೆರೆಯಲು ಕೂಪನ್ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸಬೇಕಿದೆ.
ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿಸಲಾಗಿದೆ. ದಿನಪತ್ರಿಕೆ, ದೃಶ್ಯಮಾಧ್ಯಮಗಳ ಸೇವೆಗಳಿಗೆ ಅನುಮತಿಸಲಾಗಿದೆ. ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿ ಇದೆ.
ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರಕ್ಕೆ ಸರ್ಕಾರದ ಆದೇಶದಂತೆ ಅನುಮತಿ ಇದೆ.
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್ ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಆಯುಕ್ತರು, ಮಹಾನಗರಪಾಲಿಕೆ ಮತ್ತು ಸಂಬಂಧಪಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅನುಮತಿ ಕಲ್ಪಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿದೆ. ಇ-ಕಾಮರ್ಸ್/ಹೋಮ್ ಡೆಲಿವರಿ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು ಅನುಮತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಪ್ರೊ. ಲಿಂಗಣ್ಣ, ಎಸ್.ಎ. ರವೀಂದ್ರನಾಥ್, ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.