ಶೀತ, ಜ್ವರ ಚಿಕಿತ್ಸೆಗೆ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿ

ಮಲೇಬೆನ್ನೂರು, ಮೇ 20- ಜ್ವರ ಪೀಡಿತರು ನಿಮ್ಮ ಬಳಿ ಚಿಕಿತ್ಸೆಗಾಗಿ ಬಂದಾಗ ಅವರಿಗೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು ಎಂದು ಟಿಹೆಚ್ಓ ಡಾ.ಚಂದ್ರಮೋಹನ್ ಖಾಸಗಿ ವೈದ್ಯರಿಗೆ ಕಿವಿಮಾತು ಹೇಳಿದರು.

ಅವರು ಪಟ್ಟಣದ ಪುರಸಭೆಯಲ್ಲಿ ಬುಧವಾರ ಕರೆದಿದ್ದ ಖಾಸಗಿ ವೈದ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊರೊನಾ ಸೋಂಕು ಹರಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸೇವೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಿಮ್ಮ ಕ್ಲಿನಿಕ್‌ಗಳಿಗೆ ಬರುವ ಜನರ ಆರೋಗ್ಯ ಸ್ಥಿತಿ ಗಮನಿಸಿ, ಕೋವಿಡ್ ಟೆಸ್ಟ್‌ಗೆ ಒತ್ತು ಕೊಡಿ ಎಂದು ಕರೆ ನೀಡಿದರು.

ಹಳ್ಳಿಗಳಲ್ಲಿ ಕೆಲವು ಅನಧಿಕೃತ ವೈದ್ಯರು ರೋಗಿ ಗಳಿಗೆ ಯಥೇಚ್ಛವಾಗಿ ಆಂಟಿಬಯಾಟಿಕ್ ನೀಡುತ್ತಿ ದ್ದಾರೆ. ಇದರಿಗೆ ಜನರ ಆರೋಗ್ಯದ ಮೇಲೆ ಕೆಟ್ಟ ಪರಿ ಣಾಮ ಬೀರಲಿದೆ ಎಂದು ವೈದ್ಯರು ಹೇಳಿದಾಗ ಅಂತಹ ವರನ್ನು ಪತ್ತೆ ಮಾಡಿ, ಶಿಸ್ತು ಕ್ರಮ ಜರುಗಿಸುವುದಾಗಿ ಡಾ.ಚಂದ್ರಮೋಹನ್ ಭರವಸೆ ನೀಡಿದರು.

ಮಕ್ಕಳ ತಜ್ಞ ಡಾ.ಶ್ರೀನಿವಾಸ್ ಮಾತನಾಡಿ, ಹಳ್ಳಿಗಳಲ್ಲಿ ಕೊರೊನಾ ಸೋಂಕು ಇರುವ ಎಲ್ಲಾ ಲಕ್ಷಣಗಳಿದ್ದ ರೋಗಿಗಳಿಗೆ ಟೆಸ್ಟ್ ಮಾಡಿಸದೆ ಚಿಕಿತ್ಸೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು. ಇಲ್ಲದಿದ್ದರೆ ತೊಂದರೆ ಹೆಚ್ಚಾಗಲಿವೆ ಎಂದು ಎಚ್ಚರಿಸಿದರು.

ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ.ಅಪೂರ್ವ ಮಾತನಾಡಿ, ಹಳ್ಳಿಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದರು.

ಐಎಂಎ ಮಲೇಬೆನ್ನೂರು ಶಾಖೆ ಅಧ್ಯಕ್ಷ ಡಾ.ಬಿ.ಚಂದ್ರಶೇಖರ್ ಮಾತನಾಡಿ, ಹಳ್ಳಿಗಳಲ್ಲೇ ಶೀತ, ಜ್ವರ ಬಂದವರನ್ನು ಪತ್ತೆ ಮಾಡಿ, ಟೆಸ್ಟ್ ಮಾಡುವ ವ್ಯವಸ್ಥೆ ಆಗಬೇಕೆಂದು ಸಲಹೆ ನೀಡಿದರು.

ಉಪತಹಶೀಲ್ದಾರ್ ಆರ್.ರವಿ ಅವರು, ಆರೋಗ್ಯದ ಹಿತದೃಷ್ಟಿಯಿಂದಲೂ ಕೋವಿಡ್ ಟೆಸ್ಟಿಗೆ ಜನರ ಮನವೊಲಿಸುವಂತೆ ವೈದ್ಯರಿಗೆ ಕರೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ದಿನಕರ್, ಹಿರಿಯ ವೈದ್ಯ ಡಾ.ಎಂ.ಹನುಮಂತಪ್ಪ, ತಾಲ್ಲೂಕು ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ, ವೈದ್ಯರಾದ ಡಾ.ಸ್ವಾಮಿ, ಡಾ.ಹರೀಶ್ ತೋಳಾರ್, ಪುರಸಭೆ ಅಧಿಕಾರಿಗಳಾದ ಉಮೇಶ್, ನವೀನ್, ಇಮ್ರಾನ್, ಆರೋಗ್ಯ ಕೇಂದ್ರದ ಕಿರಣ್ ಸಭೆಯಲ್ಲಿದ್ದರು.

error: Content is protected !!