ಚಿತ್ರದುರ್ಗ, ಮೇ 20 – ದಿನೇ ದಿನೇ ಕೊರೊನಾ ಕಾಯಿಲೆಯು ಹೆಚ್ಚಾಗುತ್ತಿದ್ದು, ರೋಗಿಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಸಾರ್ವಜನಿಕರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲು ಬಸವೇಶ್ವರ ಆಸ್ಪತ್ರೆಯು ನಗರದಲ್ಲಿ ಹೋಟೆಲ್ ನವೀನ್ ರೆಜೆನ್ಸಿ ಮತ್ತು ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್.ಮನ್ನಿಕೇರಿ ಅವರೊಟ್ಟಿಗೆ ನವೀನ್ ರೆಜೆನ್ಸಿಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಬಸವೇಶ್ವರ ಆಸ್ಪತ್ರೆಯಲ್ಲಿ ಈಗಾಗಲೇ 140 ಬೆಡ್‍ಗಳ ಮೂಲಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೋವಿಡ್ ಪೀಡಿತರಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಡ್‍ಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ನವೀನ್ ರೆಜೆನ್ಸಿ ಹೋಟೆಲ್ಲನ್ನು ಬಾಡಿಗೆ ಪಡೆಯಲಾಗಿದ್ದು, ಈಗಾಗಲೇ ಅಲ್ಲಿ 20 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬ್ಯುಲೆನ್ಸ್, ಆಕ್ಸಿಜನ್ ಮತ್ತು ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವರಿಸಿದರು.
ಹಾಗೆಯೇ ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ 50ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಪೀಡಿತ ಬಡವರಿಗೆ ಉಚಿತ ವೈದ್ಯಕೀಯ ಸೇವೆ, ಉಚಿತ ಪ್ರಸಾದದ ವ್ಯವಸ್ಥೆ ಒದಗಿಸಲು ಉದ್ದೇಶಿಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಫೋನ್ ಮೂಲಕ ಮಾತನಾಡಿ, ಆಸ್ಪತ್ರೆಯ ಬಗ್ಗೆ ವಿಚಾರಿಸಿದರು. ಎಲ್ಲವು ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಆಕ್ಸಿಜನ್ ವ್ಯವಸ್ಥೆಯನ್ನು ಸರ್ಕಾರ ತುರ್ತಾಗಿ ಮಾಡಬೇಕಿದೆ ಎಂದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಸದ್ಯ ಬಸವೇಶ್ವರ ಆಸ್ಪತ್ರೆಯಲ್ಲಿ 5000 ಲೀಟರ್ ಆಕ್ಸಿಜನ್ ವ್ಯವಸ್ಥೆಯಿದ್ದು, ಹಾಗೆಯೇ ಜೂನ್ ತಿಂಗಳಲ್ಲಿ ಹೊಸದಾಗಿ ಆಕ್ಸಿಜನ್ ಪ್ಲಾಂಟ್ ಕೂಡ ಮಾಡಲಾಗುತ್ತದೆ ಎಂದು ತಿಳಿಸಿದರು.
ಶ್ರೀಗಳೊಂದಿಗೆ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಬಸವೇಶ್ವರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|| ಪಾಲಾಕ್ಷಯ್ಯ, ಡಾ|| ನಾಗೇಂದ್ರ ಗೌಡ, ಡಾ|| ಸುಧಾರಾಣಿ, ಡಾ|| ಅಮೃತ, ಡಾ|| ವಿಜಯಲಕ್ಷ್ಮಿ, ಡಾ|| ನದೀಪ್, ಪ್ರದೀಪ್, ಹಾಲೇಶ್ ಮೊದಲಾದವರಿದ್ದರು.