ದಾವಣಗೆರೆ, ಮೇ 20 – ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಜನರಿಗೆ ಲಸಿಕೆ ನೀಡಲು 18 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಸವಾಲೆಸೆದಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ದಾವಣಗೆರೆ ಉತ್ತರ – ದಕ್ಷಿಣ ಎರಡೂ ಕ್ಷೇತ್ರಗಳ ಜನತೆಗೆ ಲಸಿಕೆ ವೆಚ್ಚ ಭರಿಸಲು ಸಿದ್ಧ ಎಂದು ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಹೇಳಿರುವುದಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಅವರು 18 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ತುಂಬಲಿ. ಉಳಿದ ಹಣವನ್ನು ಸರ್ಕಾರ ಭರಿಸಲಿದೆ. ನಾವು ಸರ್ಕಾರದ ಕೈ ಕಾಲು ಹಿಡಿದಾದರೂ ಲಸಿಕೆಗಳನ್ನು ತರುತ್ತೇವೆ ಎಂದವರು ಹೇಳಿದ್ದಾರೆ.
ಐದು ಸಾವಿರ ಬೆಡ್ಗಳ ಕೋವಿಡ್ ಕೇರ್ ಸೆಂಟರ್ಗೆ ಸಿದ್ಧ ಎಂದು ಎಸ್ಸೆಸ್ಸೆಂ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿದ್ದೇಶ್ವರ, ಕಾಯ್ದೆಯ ಪ್ರಕಾರ ಸರ್ಕಾರಕ್ಕೆ ಕೊಡಬೇಕಾದ ಬೆಡ್ಗಳನ್ನೇ ಇನ್ನೂ ಕೊಟ್ಟಿಲ್ಲ. ಇದರಿಂದಲೇ 3-4 ಕೋಟಿ ರೂ. ಆದಾಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ವೈಯಕ್ತಿಕ ವಿಷಯ ಮಾತನಾಡುವ ಅಗತ್ಯವಿಲ್ಲ
ಜನರ ಸೇವೆ ಮಾಡಿದ್ದಕ್ಕೆ ನಾಲ್ಕು ಬಾರಿ ಸಂಸದನಾಗಿದ್ದೇನೆ: ಸಿದ್ದೇಶ್ವರ ತಿರುಗೇಟು
ದಾವಣಗೆರೆ, ಮೇ 20 – ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ವೈಯಕ್ತಿಕ ವಿಷಯಗಳನ್ನು ಮಾತನಾಡುವ ಅಗತ್ಯವಿಲ್ಲ. ನಾನು ಜನ ಸೇವಕನೇ ಹೊರತು ಮಾಲೀಕನಲ್ಲ. ಸೇವೆ ಮಾಡಿದ್ದಕ್ಕೆ ನಾಲ್ಕು ಬಾರಿ ಲೋಕಸಭಾ ಸದಸ್ಯನಾಗಿ ಜನರು ಆಯ್ಕೆ ಮಾಡಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಮಲ್ಲಿಕಾರ್ಜುನ್ ಅವರು ತಮ್ಮ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ಈ ರೀತಿ ತಿರುಗೇಟು ನೀಡಿದ್ದಾರೆ.
ಸೋತ ಕಾರಣದಿಂದಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿರಬೇಕು. ಈ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಏನಾದರೂ ಹೇಳಿಕೆ ನೀಡುವುದಿದ್ದರೆ ತೂಕವಾಗಿ ಮಾತನಾಡಬೇಕು. ಘನತೆ – ಗೌರವ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದ ಅವರು, ಶಾಮನೂರು ಶಿವಶಂಕರಪ್ಪನವರು ಹಿರಿಯರು ಎಂದು ನಾನು ಗೌರವ ಕೊಡುತ್ತಾ ಬಂದಿದ್ದು, ಮುಂದೆಯೂ ಗೌರವ ಕೊಡುತ್ತೇನೆ. ಅವರ ಬಗ್ಗೆ ಎತ್ತ ಬೇಕತ್ತ ಮಾತನಾಡಿದರೆ ಏನಾಗುತ್ತದೆ? ಎಂದು ಕೇಳಿದರು.
ಗುಟ್ಕಾದಿಂದ ನನಗೆ ಪ್ರತಿದಿನ 1 ಕೋಟಿ ರೂ. ಆದಾಯ ಬರುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದು, ಅವರೇನು ನಮ್ಮ ಅಂಗಡಿಯಲ್ಲಿ ಗುಮಾಸ್ತರಾಗಿ ಈ ವಿಷಯ ತಿಳಿದಿದ್ದಾರೆಯೇ? ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕಿಡಿ ಕಾರಿದ್ದಾರೆ.
ತಮ್ಮದು ಮೊದಲಿನಿಂದಲೂ ಶ್ರೀಮಂತರ ಮನೆತನ. ಈ ಹಿಂದೆ 1994ರಲ್ಲಿ ನಾವೇ ಶಾಮನೂರು ಮನೆತನದವರಿಗೆ ಸಾಲ ಕೊಟ್ಟಿದ್ದೆವು ಎಂದು ಹೇಳಿದ ಅವರು, ನಾವು ದಾನ, ಧರ್ಮ ಮಾಡುತ್ತಾ ಬರುತ್ತಿದ್ದೇವೆ. ಈಗಲೂ ತಂದೆ – ತಾಯಿ ಹೆಸರಿನ ಟ್ರಸ್ಟ್ ಮೂಲಕ ಎರಡು ಆಕ್ಸಿಜನ್ ಘಟಕ ದಾನ ಮಾಡಿದ್ದೇವೆ ಎಂದರು.
ಶಾಮನೂರು ಶಿವಶಂಕರಪ್ಪ ಅವರು ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗುವ ಮುಂಚೆ ಅವರ ಆಸ್ತಿ ಎಷ್ಟಿತ್ತು ಎಂಬುದನ್ನು ಘೋಷಿಸಿಕೊಳ್ಳಲಿ. ಅವರು ಸಂಸ್ಥೆಯನ್ನು ಒಡೆದಿದ್ದಾರೆ. ಈ ಬಗ್ಗೆ ಚರ್ಚಿಸಲು ನಾನೂ ಬರುತ್ತೇನೆ. ಈ ಹಿಂದೆ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಅವರು ಸವಾಲೆಸೆದಾಗ ಯಾರೂ ಬರಲಿಲ್ಲ. ಬಾಯಲ್ಲಿ ಮಾತನಾಡುವುದು ಸುಲಭ, ನಡೆದುಕೊಳ್ಳುವುದು ಕಷ್ಟ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೂಡಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲೂ ಗರಿಷ್ಠ ಕೆಲಸ ಮಾಡುತ್ತಿದ್ದೇನೆಯೇ ಹೊರತು ಶೋಕಿಗಾಗಿ ಅಲೆದಾಡುತ್ತಿಲ್ಲ. ಅಂತಹ ಅವಶ್ಯಕತೆ, ಅಂತಹ ಬುದ್ಧಿ ನನಗಿಲ್ಲ. ಜನರ ಸೇವೆ ಮಾಡಲು ಇದ್ದೇವೆ ಎಂದು ಹೇಳಿದರು.
ಜನ ಸೇವಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ ಸಿದ್ದೇಶ್ವರ, ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಮಧ್ಯರಾತ್ರಿಯವರೆಗೂ ಜನರಿಗೆ ವೈದ್ಯಕೀಯ ನೆರವು ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ, ಬಾಪೂಜಿ ಶಿಕ್ಷಣ ಸಂಸ್ಥೆಯಿಂದ 2.10 ಕೋಟಿ ರೂ.ಗಳ ಕ್ಲಿನಿಕಲ್ ಚಾರ್ಜ್ ಪಾವತಿ ಮಾಡದೇ ಇರುವ ಬಗ್ಗೆ ಪ್ರಸ್ತಾಪಿಸಿದ ಅವರು, ಸಿ.ಜಿ. ಆಸ್ಪತ್ರೆಯ 930 ಬೆಡ್ಗಳ ಕಾರಣದಿಂದಾಗಿ ಅವರಿಗೆ ವೈದ್ಯಕೀಯ ಕಾಲೇಜು ದೊರೆತಿದೆ ಹಾಗೂ ವೈದ್ಯಕೀಯ ಕಾಲೇಜು ನಡೆಸಲು ಸಾಧ್ಯವಾಗಿದೆ. ಇಷ್ಟಾದರೂ, ಅವರು ಕ್ಲಿನಿಕಲ್ ಚಾರ್ಜ್ ಪಾವತಿಸಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕಳೆದ ಐದಾರು ತಿಂಗಳಿನಿಂದ ಕ್ಲಿನಿಕಲ್ ಚಾರ್ಜ್ ಅನ್ನು ಭರಿಸಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಲವಾರು ಪತ್ರಗಳನ್ನು ಬರೆದಿದೆ ಎಂದು ಹೇಳಿದರು.
ಸರ್ಕಾರದ ನಿಯಮಗಳ ಪ್ರಕಾರ ನೀಡಬೇಕಾದ ಬೆಡ್ಗಳನ್ನೇ ಇನ್ನೂ ಅವರು ಕೊಟ್ಟಿಲ್ಲ. ಹೆಚ್ಚುವರಿ ಬೆಡ್ ಹೇಗೆ ಕೊಡುತ್ತಾರೆ? ಸತ್ಯಕ್ಕೆ ದೂರವಾಗಿರುವುದನ್ನು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಬಿಟ್ಟುಕೊಡಬೇಕಾದ ಬೆಡ್ಗಳ ಬಗ್ಗೆ ವಿವರ ಪಡೆಯುತ್ತಿದ್ದೇವೆ. ಬೆಡ್ ಕೊಡದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭೈರತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಲಿಡ್ಕರ್ ಅಧ್ಯಕ್ಷರೂ ಆಗಿರುವ ಶಾಸಕ ಪ್ರೊ. ಲಿಂಗಣ್ಣ, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಡಿ.ಹೆಚ್.ಒ. ಡಾ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.