ರಾಣೇಬೆನ್ನೂರು, ಆ.01- ಕಾರ್ಮಿಕನ ತಂದೆ, ತಾಯಿ, ಹೆಂಡತಿ ಮಕ್ಕಳು ಒಟ್ಟಾರೆ ಇಡೀ ಕುಟುಂಬದ ಆರೋಗ್ಯ ರಕ್ಷಣೆಗೆ ರಾಣೇಬೆನ್ನೂರಿನಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಇಎಸ್ ಐ ಆಸ್ಪತ್ರೆ ತೆರೆಯುವ ಪ್ರಯತ್ನ ನಡೆಸಿರುವುದಾಗಿ ಶಾಸಕ ಅರುಣಕುಮಾರ ಪೂಜಾರ್ ಹೇಳಿದರು.
ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಂಘ ಟನೆಗಳು ಸಂಯುಕ್ತವಾಗಿ ಎಪಿಎಂಸಿ ಸಮುದಾಯ ಭವನದಲ್ಲಿ ನಡೆಸಿದ ಕಾರ್ಮಿಕರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಚಿವರ ಬಳಿ ಈ ಬಗ್ಗೆ ಪ್ರಸ್ತಾಪಿಸಿ ಮನವಿ ಸಲ್ಲಿಸಿದ್ದೇನೆ. ಅಧಿಕಾರಿಗಳು ಪೂರಕ ಕಡತ ಸಿದ್ದಗೊಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರವೇ ಮಂಜೂರಾತಿ ಪಡೆಯಲಾಗುವುದು. ನನ್ನ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ಶಾಸಕರು ವಿವರಿಸಿದರು.
ಜನಪ್ರಿಯರು ಅಂದರೆ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುವವರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿವೃದ್ಧಿ ಕೆಲಸಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡವರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಈ ದಿಸೆಯಲ್ಲಿ ಸಾಗುತ್ತಾರೆ ಎಂದು ಅತಿಥಿಗಳಾಗಿದ್ದ ವಾಯವ್ಯ ಸಾರಿಗೆ ನಿರ್ದೇಶಕ ಸಂತೋಷ ಪಾಟೀಲ್ ಹೇಳಿದರು.
ಬಡ ಕಾರ್ಮಿಕರಿಗಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಿಗಿಂತಲೂ ಅತಿ ಹೆಚ್ಚು ಕಿಟ್ಗಳನ್ನು ಯಡಿಯೂರಪ್ಪನವರು ರಾಣೇಬೆನ್ನೂರು ತಾಲ್ಲೂಕಿಗೆ ಕೊಟ್ಟಿದ್ದರು. ಅವರಂತೆಯೇ ಬೊಮ್ಮಾಯಿ ಅವರೂ ಸಹ ನಮ್ಮ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡಲಿದ್ದಾರೆ ಎಂದು ಇನ್ನೊಬ್ಬ ಅತಿಥಿ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.
ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ನಿರ್ದೇಶಕರಾದ ಬಸವರಾಜ ಹುಲ್ಲತ್ತಿ, ಪರಮೇಶ ಗೂಳಣ್ಣನವರ, ರಮೇಶನಾಯ್ಕ, ಈ.ಓ. ಪಲ್ಲವಿ ಸಾತೇನಹಳ್ಳಿ, ಕಾರ್ಮಿಕ ಅಧಿಕಾರಿ ಬಾಲಾಜಿ ಇನ್ನಿತರರಿದ್ದರು.