ಬಾಪೂಜಿ ಹಾಲ್‌ ಅಭಿವೃದ್ಧಿಗೆ ಶೀಘ್ರ ಕ್ರಮ

ಶಾಸಕ ಎಸ್.ರಾಮಪ್ಪ ಭರವಸೆ

ಮಲೇಬೆನ್ನೂರು, ಜು.30- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯು ಶಾಸಕ ಎಸ್‌. ರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ನಂದೀಶ್‌ ಮತ್ತು ಉಪಪ್ರಾಚಾರ್ಯ ಹೆಚ್‌. ಹನುಮಂತಪ್ಪ ಅವರುಗಳು, ಕಾಲೇಜು ಮತ್ತು ಪ್ರೌಢಶಾಲೆಗಳಿಗೆ ಕೊಠಡಿಗಳ ಕೊರತೆ, ಡೆಸ್ಕ್‌ ಸೇರಿದಂತೆ ಪೀಠೋಪಕರಣಗಳು ಅವಶ್ಯವಾಗಿವೆ. ಗ್ರಂಥಾಲಯಕ್ಕೆ ಹೊಸ ಕೊಠಡಿ ಹಾಗೂ ಕಾಲೇಜು ಸುತ್ತಲು ಕಾಂಪೌಂಡ್‌ ನಿರ್ಮಿಸಿ ಕೊಡುವಂತೆ ಶಾಸಕರನ್ನು ಒತ್ತಾಯಿಸಿದರು.

ಕಾಲೇಜಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಕಿಡಿಗೇಡಿಗಳು ಕಾಲೇಜು ಕಟ್ಟಡದ ಮೆಟ್ಟಿಲುಗಳನ್ನು ಒಡೆದು ಹಾಕಿದ್ದಾರೆ. ಬಾಪೂಜಿ ಹಾಲ್‌ ಕಟ್ಟಡದಲ್ಲಿರುವ ಬೆಲೆಬಾಳುವ ಕಟ್ಟಿಗೆಗಳನ್ನು ಕಳ್ಳತನ ಮಾಡಿದ್ದಾರಲ್ಲದೆ, ಕಟ್ಟಡದ ಒಳಗಡೆ ದುಶ್ಚಟಗಳನ್ನು ಮಾಡುತ್ತಿದ್ದಾರೆಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೀರ್‌ ಆಜಂ, ಸದಸ್ಯರಾದ ಹಾಲಿವಾಣದ ಕೆ. ರೇವಣಸಿದ್ದಪ್ಪ, ಕೊಕ್ಕನೂರಿನ ಎ. ಚಂದ್ರಪ್ಪ ಹಾಗೂ ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗ ಗಳು ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ನಡೆಯು ತ್ತಿವೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮದಲ್ಲಿ ಉಪನ್ಯಾಸ ನೀಡುವಂತೆ ಉಪಾ ಧ್ಯಕ್ಷ ಮೀರ್‌ ಆಜಂ ಒತ್ತಾಯಿಸಿದಾಗ ಪ್ರಾಚಾ ರ್ಯರು, ಉಪನ್ಯಾಸಕರು ಒಪ್ಪಿಕೊಂಡರು.

ಶಾಸಕ ಎಸ್‌. ರಾಮಪ್ಪ ಮಾತನಾಡಿ, ಕಾಲೇಜಿನ ಹಳೆಯ 4 ಕೊಠಡಿಗಳನ್ನು ಒಡೆದು ಹಾಕಲು ಇಲಾಖೆಯಿಂದ ಅನುಮತಿ ಪಡೆದು ಕೊಳ್ಳಿ ಎಂದು ಸೂಚಿಸಿ, ಬಾಪೂಜಿ ಹಾಲ್‌ ಅಭಿ ವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಅವರಿಂದ ಕೆಲಸ ಆಗದಿ ದ್ದರೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಪಡುತ್ತೇನೆಂದು ಭರವಸೆ ನೀಡಿದರು.

ಕಾಲೇಜು, ಪ್ರೌಢಶಾಲೆಗಳಿಗೆ ಅಗತ್ಯ ವಿರುವ ಕೊಠಡಿಗಳನ್ನು ಮಂಜೂರು ಮಾಡಿಸುತ್ತೇನೆ ಮತ್ತು ಕಾಂಪೌಂಡ್‌ ನಿರ್ಮಾಣಕ್ಕೆ ನನ್ನ ಅನುದಾನ ನೀಡುತ್ತೇನೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಪ್ರಾಚಾರ್ಯ ನಂದೀಶ್‌ ಅವರಿಗೆ ಹೇಳಿದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಅತಿ ಹೆಚ್ಚು ಅಂಕ ಪಡೆದು ತಮಿಳುನಾಡಿನ ಪ್ರತಿಷ್ಠಿತ ಎಕ್ಸಲೆನ್ಸ್‌ ಇಂಜಿನಿಯರಿಂಗ್‌ ಕಾಲೇಜಿನ ಏರೋನಾಟಿಕ್ಸ್‌ ವಿಭಾಗದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿನಿ ಸಾಹೀರದ್‌ ಅಮೀನಾ ತಂದೆ ಸೈಯದ್‌ ರೋಷನ್‌ ಅವರನ್ನು ಶಾಸಕರು ಸನ್ಮಾನಿಸಿ, ಅಭಿನಂದಿಸಿದರು.

ಉಪನ್ಯಾಸಕರಾದ ಗೊಲ್ಲರಹಳ್ಳಿ ಮಂಜುನಾಥ್‌, ಹಿಂಡಸಘಟ್ಟಿ ಹನುಮಗೌಡ, ತಿಪ್ಪೇಸ್ವಾಮಿ, ರಂಗನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ ಅಬೀದ್‌ ಅಲಿ, ಭೋವಿಕುಮಾರ್‌, ಪಿ.ಹೆಚ್‌. ಶಿವಕುಮಾರ್‌, ಚೌಡಪ್ಪ, ಭೋವಿ ಶಿವು ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!