ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಭರವಸೆ
‘ಚಿರಂತನ’ ದಿಂದ ‘ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ
ದಾವಣಗೆರೆ, ಮಾ. 14 – ಸ್ವಚ್ಛತೆಯ ಸಮೀಕ್ಷೆಯಲ್ಲಿ ದಾವಣಗೆರೆ ಕೊನೆ ಸ್ಥಾನದಲ್ಲಿದ್ದು, ಇದನ್ನು ಮೊದಲ ಹತ್ತು ಸ್ಥಾನಗಳಲ್ಲಿ ತರಲು ಮುಂದಿನ ದಿನಗಳಲ್ಲಿ §ಸ್ವಚ್ಛ ದಾವಣಗೆರೆ¬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.
ಚಿರಂತನ ಸಂಸ್ಥೆ ವತಿಯಿಂದ ನಗರದ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಸುಲಲಿತ ಜೀವನದ ಶ್ರೇಯಾಂಕದಲ್ಲಿ ದಾವಣಗೆರೆ ದೇಶದಲ್ಲೇ 9ನೇ ಸ್ಥಾನದಲ್ಲಿ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಇದೇ ವೇಳೆ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ನಾಗರಿಕರ ಜೊತೆಗೂಡಿ ಸ್ವಚ್ಛ ದಾವಣಗೆರೆ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದವರು ಹೇಳಿದ್ದಾರೆ.
ಪ್ರತಿ ಭಾನುವಾರ ಸಾರ್ವಜನಿಕರ ಜೊತೆ ಒಂದು ಗಂಟೆ ಸಭೆ ನಡೆಸುವ ಮೂಲಕ ಸ್ವಚ್ಛತೆಗೆ ಅಗತ್ಯ ಸಲಹೆಗಳನ್ನು ಪಡೆದು ಕ್ರಮ ವಹಿಸಲಾಗುವುದು. ಈ ಯೋಜನೆಗೆ ಸಾರ್ವಜನಿಕರ ಸಲಹೆ ಹಾಗೂ ಸಹಕಾರ ನೀಡಬೇಕೆಂದು ವೀರೇಶ್ ಕರೆ ನೀಡಿದರು.
ದಾವಣಗೆರೆಗೆ ರಾಷ್ಟ್ರ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗುವುದು ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮಾತನಾಡಿದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬೆಳೆಯುವವರನ್ನು ನೋಡಿದಾಗ ಜನರಲ್ಲಿ ಹೊಟ್ಟೆ ಉರಿ ಸಹಜ. ಅವರು ಬೆಳೆಯುವವರಿಗೆ ನಿಂದನೆ ಹಾಗೂ ಅವಮಾನ ಮಾಡುತ್ತಾರೆ. ಈ ಅವಮಾನಗಳನ್ನು ಗೆಲ್ಲುತ್ತಾ ಹೋದರೆ ಸಾಧನೆ ಸಾಧ್ಯ ಎಂದು ಹೇಳಿದರು.
ಮಹಿಳಾ ಸಾಧಕಿಯರನ್ನು ಗುರುತಿಸಿ, ಸನ್ಮಾನಿ ಸಲು ಆದ್ಯತೆ ನೀಡಬೇಕಿದೆ. ಮಹಿಳಾ ಸಾಧಕಿಯ ರನ್ನು ಗುರುತಿಸಿ ನಮನ ಸಲ್ಲಿಸುವುದು ಸಮಕಾಲೀನ ಶ್ರೇಷ್ಠ ಕಾರ್ಯ ಎಂದು ಶ್ರೀಗಳು ತಿಳಿಸಿದರು.
ಚಿರಂತನ ಸಂಸ್ಥಾಪಕ ಅಧ್ಯಕ್ಷೆ ದೀಪ ಎನ್. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 19 ವರ್ಷಗಳಿಂದ ತಮ್ಮ ಸಂಸ್ಥೆ 15 ಸಾವಿರಕ್ಕೂ ಹೆಚ್ಚು ಜನರಿಗೆ ನೃತ್ಯ, ಸಂಗೀತ ಹಾಗೂ ವಾದ್ಯ ವಾದನದಂತಹ ಕಲೆಗಳನ್ನು ಕಲಿಸುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿ ಮಾಲಾ, ಮೈಸೂರು ವಿ.ವಿ.ಯ ಪ್ರದರ್ಶಕ ಕಲೆಗಳ ವಿಭಾಗದ ಸಹಾಯಕ ಡೀನ್ ಡಾ. ಶೀಲಾ ಶ್ರೀಧರ್, ಕನ್ನಡಿಗರು ಸಂಸ್ಥೆಯ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿರಂತನದ ಮಾಧವ ಪದಕಿ ಸ್ವಾಗತಿಸಿದರೆ, ಇಂಚರ ನಿರೂಪಿಸಿದರು.