ಐಎಸ್ಐ ಮಾರ್ಕ್ ಇಲ್ಲದ ಮತ್ತು ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ.
– ಎಸ್ಪಿ ರಿಷ್ಯಂತ್
ದಾವಣಗೆರೆ, ಜು.30- ಇನ್ನು ಮುಂದೆ ಪ್ರಯಾಣಿಕರ ಆಟೋಗಳಲ್ಲಿ ಮೀಟರ್ಗಳ ಅಳವಡಿಕೆಯನ್ನು ಜಿಲ್ಲೆಯಲ್ಲಿ ಕಡ್ಡಾಯಗೊಳಿ ಸುತ್ತಿದ್ದು, ಬರುವ ಆಗಸ್ಟ್ 15 ರೊಳಗಾಗಿ ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಮೀಟರ್ಗಳನ್ನು ಅವಳಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ಸೂಚಿಸಿದ್ದು, ಹಾಗೇನಾದರೂ ಮೀಟರ್ ಅಳವಡಿಸಿಕೊಳ್ಳದೇ ಇದ್ದರೆ ಪರ ವಾನಗಿ ರದ್ದುಗೊಳಿಸುವುದಾಗಿಯೂ ಖಡಕ್ ಮುನ್ನೆಚ್ಚರಿಕೆ ನೀಡಿದೆ.
ಆಟೋ ಚಾಲಕರು ಸಾರ್ವಜನಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. ನಿಗದಿತ ದರಕ್ಕಿಂತ 50, 100 ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿ ದ್ದಾರೆ. ಇನ್ನು ರಾತ್ರಿ ವೇಳೆ ದುಪ್ಪಟ್ಟು ದರ ವಸೂಲಿ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಯಲ್ಲಿ ಇನ್ಮುಂದೆ ಆಟೋಗಳಿಗೆ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುವುದು. ಈ ಬಗ್ಗೆ ಆ.15ರವರೆಗೆ ಸಮಯಾವಕಾಶ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್ ಟಿಓದಿಂದ ಆಟೋಗಳನ್ನು ನೋಂದಣಿ ಮಾಡಿಸುವಾಗ ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಯಮವಿದೆ. ಈ ನಿಯಮವನ್ನು ಆಟೋ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಆರ್ ಟಿಓ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಶೀಘ್ರವೇ ಸಭೆ ಕರೆದು ಎಲ್ಲಾ ಆಟೋ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಐಎಸ್ಐ ಮಾರ್ಕ್ ವುಳ್ಳ ಹೆಲ್ಮೆಟ್ ಕಡ್ಡಾಯ: ಐಎಸ್ ಐ ಮಾರ್ಕ್ ಇಲ್ಲದ ಮತ್ತು ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ ಎಂದು ಎಸ್ಪಿ ರಿಷ್ಯಂತ್ ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಸಿದ್ದು, ಐಎಸ್ ಐ ಮಾರ್ಕ್ ಇರುವ ಸುರಕ್ಷಿತ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು.
ಪೊಲೀಸ್ ಇಲಾಖೆಯಿಂದ ಅರ್ಧ ಹೆಲ್ಮೆಟ್ ಮತ್ತು ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಮಾರಾಟಗಾರರಿಗೆ ನೋಟಿಸ್ ನೀಡಲಾಗುತ್ತಿದೆ. ಸಾರ್ವಜನಿಕರು ಕೂಡ ಅರ್ಧ ಹೆಲ್ಮೆಟ್ ಧರಿಸುವುದನ್ನು ನಿಲ್ಲಿಸಿ, ಐಎಸ್ ಐ ಮಾರ್ಕ್ ಇರುವ ಸುರಕ್ಷಿತ ಹೆಲ್ಮೆಟ್ ಧರಿಸಲು ಮುಂದಾಗುವ ಮುಖೇನ ಜೀವ ರಕ್ಷಿಸಿಕೊಳ್ಳುವಂತೆ ಮನವರಿಕೆ ಮಾಡಿದರು.
ಅರ್ಧ ಹೆಲ್ಮೆಟ್ ಜೀವ ರಕ್ಷಕವಲ್ಲ. ಅಪಘಾತದ ವೇಳೆ ಐಎಸ್ ಐ ಮಾರ್ಕಿನ ಹೆಲ್ಮೆಟ್ ಸುರಕ್ಷಿತವಾಗಿದೆ. ಹೀಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಬೇಕು. ಅಲ್ಲದೇ ಅಸುರಕ್ಷಿತ ಅರ್ಧ ಹೆಲ್ಮೆಟ್ ಮಾರುವವರು ಕಂಡರೆ 112 ನಂಬರ್ ಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಬೇಕು. ಅವರ ವಿರುದ್ಧ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದರು.
ಆನ್ ಲೈನ್ ವಂಚನೆಯಿಂದ ಪಾರಾಗಲು 112 ಸಂಪರ್ಕಿಸಿ: ಆನ್ ಲೈನ್ ಮುಖೇನ ವಂಚಿಸುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದ್ದು, ಎಟಿಎಂ ಪಿನ್ ನಂಬರ್ ಅಥವಾ ಒಟಿಪಿ ನಂಬರ್ ಪಡೆದು ವಂಚಿಸುವುದು ಹೆಚ್ಚಾಗಿದೆ. ಹೀಗೆ ಆನ್ ಲೈನ್ ಮುಖೇನ ವಂಚನೆಗೊಳಗಾದ ತಕ್ಷಣವೇ 112 ನಂಬರ್ ಗೆ ಕೆರೆ ಮಾಡಿ ದೂರು ದಾಖಲಿಸಿದರೆ ಸೂಕ್ತ ಕ್ರಮಕ್ಕೆ ಅನುಕೂಲವಾಗಲಿದೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.
ಸೈಬರ್ ಕ್ರೈಂ ನಡೆದು ಮೂರ್ನಾಲ್ಕು ದಿನದ ನಂತರ ಸಾರ್ವಜನಿಕರು ಬಂದು ದೂರು ನೀಡುವುದರಿಂದ ವಂಚಕರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ವಂಚಿಸಿದ ಬಗ್ಗೆ ತಕ್ಷಣವೇ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ದೂರು ದಾಖಲಿಸಬೇಕು. ನಿಮ್ಮ ದೂರು ಬೆಂಗಳೂರಲ್ಲಿ ದಾಖಲಾಗುತ್ತಿದೆ. ಅವರು ತಕ್ಷಣ ವಂಚಕರ ಅಕೌಂಟ್ ಬ್ಯಾನ್ ಮಾಡಿ, ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ಹೇಳಿದರು.