ರೆಡ್‍ಕ್ರಾಸ್ ನಿಂದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ

ದಾವಣಗೆರೆ, ಮೇ 19- ಕೊರೊನಾ ಕಾಲದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೇಕಾಗಿರುವ ಆಮ್ಲಜನಕ ಕೊರತೆ ನಿವಾರಣೆಗಾಗಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಶಾಖೆ ನಿರ್ಧರಿಸಿದೆ.

ದೇಶದೆಲ್ಲೆಡೆ ಕೋವಿಡ್ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ದಾವಣಗೆರೆ ಜಿಲ್ಲೆಯಲ್ಲಿ ತುರ್ತು ಸ್ಥಿತಿಯಲ್ಲಿ ಅಳಿಲು ಸೇವೆ ಎಂಬ ಘೋಷಣೆಯಡಿ ಸಾರ್ವ ಜನಿಕರ ಸಹಭಾಗಿತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಗರದ ಹಾಗೂ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಕೊಡುಗೈ ದಾನಿಗಳ ನೆರವಿನಿಂದ ಸಂಸ್ಥೆಯ ಆವರಣದಲ್ಲಿ ಸುಮಾರು ಮೂವತ್ತು ಲಕ್ಷದ ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಸಂಸ್ಥೆಯ ಛೇರ್ಮನ್ ಡಾ. ಎ.ಎಂ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕಾಗಿ ನಿಧಿ ಸಂಗ್ರಹಣೆ ಅಭಿಯಾನ ಆರಂಭವಾಗಿದ್ದು, ಹಲವು ದಾನಿಗಳು, ಸಂಘಟನೆಗಳು ನೆರವು ನೀಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ 17 ಜಂಬೂ ಸಿಲಿಂಡರ್ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲು 30 ಲಕ್ಷ ರೂ. ಬಂಡವಾಳ ಹೂಡಬೇಕಾಗಿದ್ದು, ಇದಕ್ಕಾಗಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್, ಸ್ವಯಂ ಪ್ರೇರಿತ ರಕ್ತದಾನಿಗಳ ಒಕ್ಕೂಟ ಲೈಫ್‍ಲೈನ್, ಗೆಳೆಯರ ಪ್ರತಿಷ್ಠಾನ ಇನ್ನೂ ಹಲವು ಸಂಘಟನೆಗಳು ಸಹಕಾರ ನೀಡಲಿದ್ದು, ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಬೆಂಬಲವಾಗಿ ನಿಂತಿದೆ ಎಂದು ಹೇಳಿದರು.

ಗೆಳೆಯರು ಪ್ರತಿಷ್ಠಾನದ ಆರ್.ಟಿ. ಅರುಣ್ ಕುಮಾರ್ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಾರಂಭಿಸಲಾಗುವ ಆಕ್ಸಿಜನ್ ಉತ್ಪಾದನಾ ಘಟಕದ ಯೋಜನೆಯನ್ನು ಕುರಿತು ವಿದೇಶದಲ್ಲಿರುವ ಗೆಳೆಯರೊಂದಿಗೆ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 4 ಲಕ್ಷ ರೂ. ಸಂದಾಯವಾಯಿತು. ಈ ಹಿನ್ನೆಲೆಯಲ್ಲಿ ನೋಡಿದಾಗ ದಾವಣಗೆರೆಯಲ್ಲಿ ಓದಿದ ಇಂಜಿನಿಯರ್, ಡಾಕ್ಟರ್‍ಗಳು ತಲಾ ಒಂದೊಂದು ಸಾವಿರ ರೂ. ಅಥವಾ ಹೆಚ್ಚಿನ ಹಣ ಕೊಡುಗೆಯಾಗಿ ನೀಡಿದಲ್ಲಿ ಅನುಕೂಲ ಆಗಲಿದೆ. ಅದರಂತೆ ಪ್ರತಿಯೊಬ್ಬ ಆಸಕ್ತನು ಕೇವಲ 100 ರೂ. ಹಾಕಿದರೂ ಸಾಕು. `ನಾವು ಉಸಿರಾಡುವ ನೆಲದಲ್ಲಿ ಕೆಲವು ರೋಗಿಗಳು ಉಸಿರುಗಟ್ಟುತ್ತಿದ್ದಾರೆ. ಅವರಿಗೆ ನೀಡಲಾಗುವ ಪ್ರಾಣವಾಯುವಿಗಾಗಿ ನೆರವು ನೀಡಿ’ ಎಂದು ಮಾಧ್ಯಮದ ಮೂಲಕ ಮನವಿ ಮಾಡುತ್ತಿದ್ದೇವೆ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುತ್ತಿದ್ದೇವೆ. ಈಗಾಗಲೇ ಅಮೆರಿಕಾದ ಡಾ.ಪ್ರದೀಪ್ ಅಂಗಡಿ, ಡಾ.ಉಮಾಪತಿ ಅವರು ತಲಾ ಒಂದು ಲಕ್ಷ ರೂ. ಹಾಗೂ ಇಂಜಿನಿಯರ್ ವಿ.ರವೀಂದ್ರ ಮತ್ತು ಗೆಳೆಯರು ಒಂದೆರಡು ಲಕ್ಷ ರೂ. ಸಂದಾಯ ಮಾಡಲಿದ್ದಾರೆ. 

ಎನ್‌ಆರ್ಐ ಗೆಳೆಯರು ಒಂದು ವಾಟ್ಸಾಪ್ ಗ್ರೂಪ್‌ನಲ್ಲಿ ಸಂದಾಯ ಹಣ ಸಂಗ್ರಹಣೆಗೆ ಮುಂದಾಗುತ್ತಿದ್ದಾರೆ. 

ಡಾ. ಸುನೀಲ್ ಬ್ಯಾಡಗಿ ನೇತೃತ್ವದ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್‍ನಿಂದ ಒಂದು ಲಕ್ಷ ರೂ. ಹಾಗೂ ಸ್ವತಃ ಡಾ. ಎ.ಎಂ.ಶಿವಕುಮಾರ್ ಅವರು ಒಂದು ಲಕ್ಷ ರೂ. ನೀಡಿದ್ದಾರೆ. ದಾನಿಗಳು, ಸಂಘ-ಸಂಸ್ಥೆಗಳು ನೇರವಾಗಿ ಇಲ್ಲವೇ ಚೆಕ್ ಮುಖಾಂತರ ದಾನ ಮಾಡಲು ವಿನಂತಿಸಿದರು.

INDIAN RED CROSS SOCIETY A/C NO: 64026238520, ಸ್ವೇಟ್ ಬ್ಯಾಂಕ್ ಆಪ್ ಇಂಡಿಯಾ, ದಾವಣಗೆರೆ. IFSC CODE: SBIN0040947 ದೂರವಾಣಿ ಸಂಖ್ಯೆ: 9964582203 , 08192252550.

ಗೋಷ್ಠಿಯಲ್ಲಿ ಸಿ.ಎ. ಉಮೇಶ್, ಅನಿಲ್ ಬಾರೆಂಗಳ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ ಇದ್ದರು.

error: Content is protected !!