ಮಹಿಳೆ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಶೋಷಣೆ ಮಾತ್ರ ನಿಂತಿಲ್ಲ

ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವೆ ಡಾ. ಅನಿತಾ ವಿಷಾದ

ದಾವಣಗೆರೆ, ಮಾ.14- ಮಹಿಳೆ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಶೋಷಣೆ ಮಾತ್ರ ನಿಂತಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿ ಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಹೆಚ್.ಎಸ್. ಅನಿತಾ ವಿಷಾದಿಸಿದರು.

ಎಸ್.ಎಸ್. ಬಡಾವಣೆಯ ಸುಶೀಲಮ್ಮ ಬಂಕಾಪುರ ಚನ್ನಬಸಪ್ಪ (ಎಸ್‍ಬಿಸಿ) ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರದಕ್ಷಿಣೆ ಸೇರಿದಂತೆ, ಸಮಾಜದಲ್ಲಿ ಮಹಿಳೆಯರು ಒಂದಲ್ಲಾ ಒಂದು ಸಾಮಾಜಿಕ ಪಿಡುಗಿನಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೂ ಕುಟುಂಬ, ಸಮಾಜಕ್ಕಾಗಿ ತನ್ನದೇ ಆದ ಕೊಡುಗೆ ನೀಡುವ ಮೂಲಕ ಅವಳು ಮಾತೃ ಸ್ವರೂಪಿ ಆಗಿರುತ್ತಾಳೆ ಎಂದು ತಿಳಿಸಿದರು.

ಮಗುವಿನಿಂದ ಹಿಡಿದು ಮಹಿಳೆ ಆಗುವವರೆಗೂ ವಿವಿಧ ಹಂತಗಳನ್ನು ತಲುಪುವ ಆಕೆ ತಾಯಿ, ಅಕ್ಕ, ತಂಗಿ, ಹೆಂಡತಿ, ಶಿಕ್ಷಕಿ ಹೀಗೆ ಅನೇಕ ಸ್ಥಾನಗಳನ್ನು ಪಡೆದಿದ್ದಾಳೆ. ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದು ಸತ್ಯ. ಇದು ಭಾರತದಲ್ಲಿ ಆಗಬೇಕಾದರೆ ಹೆಣ್ಣು ತನ್ನದೇ ಸ್ಥಾನಮಾನಗಳನ್ನು ಪಡೆಯಬೇಕಿದೆ ಎಂದು ಆಶಿಸಿದರು.

ಸಂಸಾರದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರು ಸಮಾನರಾಗಿದ್ದಾಗ ಕುಟುಂಬ ಆರೋಗ್ಯಪೂರ್ಣವಾಗಿರಲು ಸಾಧ್ಯ. ಇದನ್ನು ಅರ್ಥಮಾಡಿಕೊಳ್ಳುವ ಮನೋಭಾವನೆ ಬರಬೇಕಿದೆ. ಭಾರತೀಯರಾಗಿ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಬೇಕೆಂದರು.

ದಾವಣಗೆರೆ ವಿವಿ ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ ಮಾತನಾಡಿ, ಪ್ರತಿ ಯಶಸ್ವೀ ಪುರುಷನ ಹಿಂದೆ ಮಹಿಳೆ ಇರುವಂತೆ, ನನ್ನ ಯಶಸ್ಸಿಗೆ ನನ್ನ ತಂದೆ ಪ್ರೋತ್ಸಾಹಿಸಿದ್ದಾರೆ. ಹೆಣ್ಣುಮಕ್ಕಳ ಸಾಧನೆಗೆ ಪೋಷಕರು, ಸಹೋದರರು, ಸಮಾಜದ ಪ್ರೋತ್ಸಾಹ ಅವಶ್ಯ. ಯಾರನ್ನೂ ಸಹ ಕೀಳಾಗಿ ಕಾಣಬಾರದು. ಪ್ರತಿ ಯೊಬ್ಬರಲ್ಲೂ ಪ್ರತಿಭೆ, ಸಾಧನೆಯ ಸಾಮರ್ಥ್ಯ ಇರಲಿದ್ದು, ಅದನ್ನು ಗುರುತಿಸಬೇಕೆಂದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ಪೋಷಕರಿದ್ದಂತೆ. ಅವರಿಗೂ ಸಹ ತನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಲಿ ಎಂದು ಮಾರ್ಗದರ್ಶನ ಮಾಡುತ್ತಾರೆ. ಅದನ್ನು ನಾವುಗಳು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖಪ್ಪ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ ಮೊದಲಾದ ಸಾಧಕಿಯರು ಎಲ್ಲರಿಗೂ ಆದರ್ಶವಾಗಬೇಕು. ಚೆನ್ನಾಗಿ ಓದುವುದರ ಜೊತೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಭಾಗ್ಯಶ್ರೀ ಹುಬ್ಳೀಕರ್ ಸ್ವಾಗತಿಸಿದರು. ಕೆ.ಬಿ. ಚಿನ್ಮಯ್ ಪ್ರಾರ್ಥಿಸಿದರು. ಸೌಮ್ಯ ವಂದಿಸಿದರು.

error: Content is protected !!