ಸಾಣೇಹಳ್ಳಿ ಶ್ರೀ
ಸಾಣೇಹಳ್ಳಿ, ಮಾ.14- ವಚನಗಳನ್ನು ಹಾಡುವುದು, ಅರ್ಥೈಸುವುದು ಸುಲಭ. ಆದರೆ ಪಾಲಿಸುವುದು ಕಷ್ಟಸಾಧ್ಯ. ಬಸವಣ್ಣ ನವರು `ನಿಮಗೆ ಕೇಡಿಲ್ಲದಂತೆ ಆನು ಹಾಡುವೆ’ ಎಂದು ಹೇಳುವಂತೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು. ವಚನಗಳ ಹಿಂದೆ ನಾವು ಹೋದರೆ, ಬದುಕಿನ ಎಲ್ಲ ಕರ್ಮಟಗಳನ್ನು ಕಳೆದುಕೊಂಡು ಹೊಸ ಮನುಷ್ಯರಾಗಲು ಸಾಧ್ಯವಾಗುತ್ತದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.
ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಶಿವರಾತ್ರಿಯನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು, ಶರಣರು ಹೇಳು ವಂತೆ ನಿತ್ಯವೂ ಶಿವರಾತ್ರಿಯಾಗಬೇಕು. ಅಂದರೆ ನಿತ್ಯವೂ ಒಳಿತನ್ನೇ ಯೋಚಿಸಬೇಕು, ಒಳಿತನ್ನೇ ಮಾಡಬೇಕು. ಅರಿವು-ಆಚಾರವುಳ್ಳವನೇ ಶರಣ. ಇಂಥ ಶರಣರು ನಾವಾಗಬೇಕು. ಶರಣರು ಒತ್ತು ಕೊಟ್ಟಿದ್ದು ಮೊದಲಿಗೆ ಕಾಯಕಕ್ಕೆ, ನಂತರ ದಾಸೋಹ ಮತ್ತು ಪೂಜೆಗೆ. ಈ ಮೂರನ್ನೂ ಮನುಷ್ಯ ಮೈಗೂಡಿಸಿಕೊಂಡರೆ ಶರಣರು ಕಂಡ ಕಲ್ಯಾಣ ರಾಜ್ಯವನ್ನು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.
ವಚನ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತ ಅಧ್ಯಾಪಕರಾದ ಕೆ. ಭಾಗ್ಯಶ್ರೀ, ಎ.ಎಸ್. ಶಿಲ್ಪಾ, ಬಿ.ಎಸ್. ಪ್ರಭು, ಕೆ. ಅನಿಲ್ ಕುಮಾರ್, ಕೆ. ಎಂ. ವೀಣಾ, ಹೆಚ್. ಆರ್. ಕಾವ್ಯ, ದೀಪಾ ವಚನ ಹಾಡುವುದರ ಜೊತೆಗೆ `ಶರಣರು ಕಂಡ ಶಿವರಾತ್ರಿ’ ಕುರಿತಂತೆ ಮಾತನಾಡಿದರು.
ಸಾಮೂಹಿಕ ವಚನ ಗೀತೆಯನ್ನು ಡಿ.ಎಸ್. ಸುಪ್ರಭೆ ಮತ್ತು ಡಿ.ಜೆ. ಮುಕ್ತಾ ನಡೆಸಿಕೊಟ್ಟರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್ ಮತ್ತು ತಬಲಾ ಸಾಥಿ ಶರಣ್ ತಂಡದವರು ಸುಮಧುರವಾಗಿ ವಚನ ಗೀತೆಗಳನ್ನು ಹಾಡಿದರು. ಅಧ್ಯಾಪಕಿ ಭಾಗ್ಯಶ್ರೀ ನಿರೂಪಿಸಿದರು. ಅಧ್ಯಾಪಕ ಎ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು.