ಸುಮತಿ ಜಯಪ್ಪ
ದಾವಣಗೆರೆ, ಮಾ.14- ಪ್ರಸ್ತುತ ಮಹಿಳೆ ಮನೆಯ ಅಂಗಳದಿಂದ ಹಿಡಿದು ಮಂಗಳನ ಅಂಗಳದಲ್ಲಿ ಕಾಲಿಟ್ಟಿದ್ದರೂ ಭ್ರೂಣಾವಸ್ಥೆಯಿಂದ ಮಸಣಕ್ಕೆ ಹೋಗುವವರೆಗೂ ಅನೇಕ ಸವಾಲು ಗಳನ್ನು ಎದುರಿಸುತ್ತಿದ್ದಾಳೆ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಕಳವಳ ವ್ಯಕ್ತಪಡಿಸಿದರು.
ಅವರು, ಇಂದು ನಗರದ ರೋಟರಿ ಬಾಲ ಭವನದಲ್ಲಿ ಸೋಮವಂಶ ಶ್ರೀ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ನೀರೆಯರು ಮತ್ತು ನೀರು ಇಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ. ಪೋಷಕರಲ್ಲಿ ಗಂಡೇ ಶ್ರೇಷ್ಠ, ಹೆಣ್ಣೆಂದರೆ ಹುಣ್ಣು ಎಂಬ ಭಾವನೆ ಇರುವುದರಿಂದ ಮತ್ತು ವರದಕ್ಷಿಣೆಯ ಪಿಡುಗಿನ ಕಾರಣಕ್ಕೆ ದೇಶದಲ್ಲಿ ಪ್ರತಿ ದಿನ 600ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಆದ್ದರಿಂದ ಲಿಂಗಾನುಪಾತದಲ್ಲಿ ಗಂಡಸರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಭ್ರೂಣ ಹತ್ಯೆ ಮುಂದುವರೆದರೆ ಮಹಿಳೆಯರಿಗೆ ಮುಂದೆ ಮತ್ತಷ್ಟು ಅಸುರಕ್ಷತೆ ಭಾವನೆ ಕಾಡಲಿದೆ. ಮಹಿಳೆಗೆ ದ್ರೌಪದಿಯ ದುಸ್ಥಿತಿ ಎದುರಿಸುವ ಕಾಲ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮನೆಯನ್ನು ಸ್ವರ್ಗವನ್ನಾಗಿ ಸೃಷ್ಟಿಸುವ ಮತ್ತು ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ತಾಯಂದಿರ ಮೇಲಿದೆ. ಆದ್ದರಿಂದ ತಾಯಂದಿರು ಮಕ್ಕಳಲ್ಲಿ ಭೇದ ಮಾಡದೆ ಗಂಡು ಮತ್ತು ಹೆಣ್ಣನ್ನು ಸಮಾನವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಮನೆಯನ್ನು ಸ್ವರ್ಗ ಅಥವಾ ನರಕವನ್ನಾಗಿಸುವುದು ಮನೆಯ ಮಹಿಳೆಯರ ನಡವಳಿಕೆ ಮೇಲೆ ನಿಂತಿದೆಯೇ ಹೊರತು, ಚಾಡಿ ಹೇಳುವ ಸ್ವಭಾವವೇ ಇಲ್ಲದ ಪುರುಷನ ಮೇಲಲ್ಲ. ಹೀಗಾಗಿ ಮಹಿಳೆಯರು ಕೆಟ್ಟ ಗುಣಗಳನ್ನು ಬಿಟ್ಟು ಪತಿ ಮತ್ತು ಅತ್ತೆಯೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಆಶಾ ಉಮೇಶ್, ಸೋಮವಂಶ ಶ್ರೀ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಮಹಿಳಾ ಘಟಕದ ರಾಧಾ ಬಾಯಿ ಮೇಹರ್ವಾಡೆ, ಶುಭಾಂಜಲಿ ಆರ್ ಕಠಾರೆ, ಪದ್ಮ ಬಾಯಿ ಎಂ. ಭೂತೆ, ಚಂದಾ ಭೂತೆ ಸೇರಿದಂತೆ ಇತರರು ಇದ್ದರು.