ಕಾರ್ಮಿಕ ಇಲಾಖೆ ವಿರುದ್ದ ಪ್ರತಿಭಟನೆ
ದಾವಣಗೆರೆ, ಜು.29- ಬೋಗಸ್ ಕಾರ್ಡ್ ವಿತರಣೆ ವಿರುದ್ಧ ಹಾಗೂ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರೂ ಸ್ಪಂದಿಸದ ಕಾರಣ ಕಾರ್ಮಿಕ ಇಲಾಖೆ ವಿರುದ್ದ ನಗರದಲ್ಲಿಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ದೇವರಾಜು ಅರಸು ಬಡಾವಣೆಯಲ್ಲಿನ ಜಿಲ್ಲಾ ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿದ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕರ ನೋಂದಣಿ ನೈಜತೆ ಕಾಪಾಡಲು ಸಂಘಟನೆಗಳ ದೃಢೀಕರಣ ಪತ್ರಕ್ಕೆ ಮಾನ್ಯತೆ ನೀಡಬೇಕು. ಅಲ್ಲದೇ ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಸಮನ್ವಯ ಸಮಿತಿಯನ್ನು ಇಲಾಖೆ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ಕಟ್ಟಡ ಕಾರ್ಮಿಕರ ಭದ್ರತೆಗೆ ಯಾವ ಸೌಲಭ್ಯಗಳೂ ಇಲ್ಲ. ಯಾವುದೇ ಸರ್ಕಾರದ ಹಣ ತೆಗೆದುಕೊಳ್ಳದೇ ಕಲ್ಯಾಣ ಮಂಡಳಿ ನಿರ್ಮಿಸಿ ನಮ್ಮಿಂದಲೇ ಪಡೆಯಲಾದ ಹಣದಿಂದ 10 ಸಾವಿರ ಕೋಟಿ ಇದೆ. ಇದು ಯಾವುದೇ ರಾಜಕಾರಣಿಗಳು, ಅಧಿಕಾರಿಗಳ ಹಣವಲ್ಲ ಎಂದು ಪ್ರತಿಭ ಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರದ್ದೇ ಹಣವನ್ನು ಇಲಾಖೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಬೀದಿಗೆ ಬಿದ್ದಿದ್ದರೂ ಸಹ ಕಲ್ಯಾಣ ಮಂಡಳಿಯಿಂದ ಅರ್ಹ ಕಾರ್ಮಿಕರಿಗೆ ಯಾವುದೇ ಪರಿಹಾರ ದೊರಕಲಿಲ್ಲ. ಕೇವಲ ಬೋಗಸ್ ಕಾರ್ಡ್ಗಳನ್ನು ಹೊಂದಿರುವ ಜನರಿಗೆ ಪರಿಹಾರ, ಆಹಾರದ ಕಿಟ್ಗಳನ್ನು ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ 24 ಲಕ್ಷ ಕಾರ್ಮಿಕರು ಇದ್ದಾರೆ ಎಂದು ಹೇಳಿದೆ. ಆದರೆ, ಸಂಘಟನೆಗಳು ಸಮೀಕ್ಷೆ ಮಾಡಿದ ಪ್ರಕಾರ ಇಡೀ ರಾಜ್ಯದಲ್ಲಿ 17ರಿಂದ 18 ಲಕ್ಷ ಕಟ್ಟಡ ಕಾರ್ಮಿಕರಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಮಿಕರು ಎಲ್ಲಿಂದ ಸೇರ್ಪಡೆಗೊಂಡರು. ಬೋಗಸ್ ಕಾರ್ಡ್ಗಳು ಎಷ್ಟು ಎನ್ನುವುದನ್ನು ಇಲಾಖೆ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸತೀಶ್ ಅರವಿಂದ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಂಜುನಾಥ್ ಕುಕ್ಕುವಾಡ, ಬಿ. ದುಗ್ಗಪ್ಪ, ಆದಿಲ್ಖಾನ್, ದಾದಾಪೀರ್, ಯರಗುಂಟೆ ಸುರೇಶ್, ಹೆಚ್ಕೆಆರ್ ಸುರೇಶ್, ಎಸ್. ಮುರುಗೇಶ್, ಭೀಮಾರೆಡ್ಡಿ ಮುಂತಾದ ಕಾರ್ಮಿಕರು ಭಾಗವಹಿಸಿದ್ದರು.