ಕಾಮಗಾರಿ ವೇಗ ಹೆಚ್ಚಿಸಲು ಎಸ್.ಟಿ. ವೀರೇಶ್ ಸೂಚನೆ
ದಾವಣಗೆರೆ, ಜು.29- ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ನೇತೃತ್ವದಲ್ಲಿ ಜೀವ ವೈವಿಧ್ಯ ಸಲಹಾ ಮಂಡಳಿಯ ತಂಡ, ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ತಂಡವು ಗುರುವಾರ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಜೀವ ವೈವಿಧ್ಯ ಸಲಹಾ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದಂತೆ ಇಂದು ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದಾಗಿ ಮಂಡಳಿಯ ಸದಸ್ಯರೂ ಆಗಿರುವ ಮೇಯರ್ ಎಸ್.ಟಿ. ವೀರೇಶ್ ಪತ್ರಿಕೆಗೆ ತಿಳಿಸಿದರು.
ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದ್ದು, ಕಾಮಗಾರಿ ಆರಂಭವಾಗಿದೆ.
ಮುಂದಿನ ದಿನಗಳಲ್ಲಿ ನಗರಕ್ಕೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಾಮಗಾರಿ ವೇಗವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.
ಅಭಿವೃದ್ಧಿ ಕಾಮಗಾರಿ ವೇಳೆ ಜೀವ ವೈವಿಧ್ಯ ಸಲಹಾ ಮಂಡಳಿ ಸದಸ್ಯರ ಸಲಹೆ ಪಡೆಯಬೇಕಿದ್ದು, ಸಾಧ್ಯವಾದಷ್ಟೂ ಕೆರೆಯ ಬಂಡ್ ಚಿಕ್ಕದು ಮಾಡು ವಂತೆ, ಸಿಮೆಂಟೀಕರಣ ಹೆಚ್ಚು ಮಾಡದದಂತೆ, ಜೀವ ವೈವಿದ್ಯತೆಗೆೆ ಧಕ್ಕೆ ಬಾರದಂತೆ ಸಲಹೆಗಳನ್ನು ನೀಡಲಾಗಿದೆ ಎಂದು ಮಂಡಳಿ ಸದಸ್ಯ ಗಿರೀಶ್ ದೇವರಮನಿ ಹೇಳಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಜೀವ ವೈವಿಧ್ಯ ಸಲಹಾ ಮಂಡಳಿ ಸದಸ್ಯರುಗಳಾದ ಗುರುಸಿದ್ದಸ್ವಾಮಿ, ಹೆಚ್.ಸಿ. ಜಯಮ್ಮ, ರಘು ದೊಡ್ಮನಿ, ರೋಹಿಣಿ ಸೇರಿದಂತೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.