ಹೊಂಡದ ಸರ್ಕಲ್‌ನಲ್ಲಿ ಆಕರ್ಷಣೀಯ ಪುಷ್ಕರಣಿ

ಇನ್ನೆರಡು ತಿಂಗಳಲ್ಲಿ ಮತ್ತೊಂದು ಪ್ರೇಕ್ಷಣೀಯ ಸ್ಥಳ ಸಿದ್ಧವಾಗುವ ನಿರೀಕ್ಷೆ

ದಾವಣಗೆರೆ, ಮೇ 18 – ನಗರದ ಹೊಂಡದ ಸರ್ಕಲ್‌ ಬಳಿ ಹಾಳಾಗಿ ಕಸದ ತಾಣವಾಗಿದ್ದ ಬಾವಿ, ಈಗ ಸುಂದರ ಪುಷ್ಕರಣಿಯಾಗಿ ತಲೆ ಎತ್ತುತ್ತಿದೆ. ಲಾಕ್‌ಡೌನ್‌ ಅಡ್ಡಿಗಳು ತೆರವಾದಲ್ಲಿ, ಇನ್ನೆರಡು ತಿಂಗಳಲ್ಲಿ ಪುಷ್ಕರಣಿ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

3.10 ಕೋಟಿ ರೂ.ಗಳ ಅಂದಾಜು ವೆಚ್ಚದ ಪುಷ್ಕರಣಿಯು 26.4 x 26.4 ಮೀಟರ್ ಅಳತೆಯಲ್ಲಿ ನಿರ್ಮಾಣವಾಗುತ್ತಿದೆ. 4.75 ಮೀಟರ್‌ ಆಳ ಹೊಂದಿರುವ ಪುಷ್ಕರಣಿ, ಮುಂದಿನ ದಿನಗಳಲ್ಲಿ ಕಾರಂಜಿ ವ್ಯವಸ್ಥೆಯನ್ನು ಕಾಣಲಿದೆ.

88 ಕಂಬಗಳು, 80 ಬೀಮ್‌ಗಳು ಹಾಗೂ 154 ಪರಗೋಲ (ಲತಾಗೃಹ) ಗಳನ್ನು ಅಳವಡಿಸಲಾಗಿದೆ. ಪುಷ್ಕರಣಿಯ ನಾಲ್ಕು ಕಡೆಗಳಲ್ಲಿ ಗೋಪುರ ಅಳವಡಿಕೆಗೆ ಸಿದ್ಧತೆ ನಡೆದಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ನೆಲಮಂಗಲದಲ್ಲಿ ಗೋಪುರಗಳು ಸಿದ್ಧವಾಗುತ್ತಿವೆ. ಲಾಕ್‌ಡೌನ್‌ ಇಲ್ಲದೇ ಹೋಗಿದ್ದರೆ, ಇಷ್ಟರ ವೇಳೆಗೆ ಕಾಮಗಾರಿ ಪೂರ್ಣಗೊಂಡಿರುತ್ತಿತ್ತು ಎಂದವರು ಹೇಳಿದ್ದಾರೆ.

ಪುಷ್ಕರಣಿಗೆ ಹೊಂಡದ ಸರ್ಕಲ್‌ನಿಂದ ಬರಲು ಮಾರ್ಗ, ಲ್ಯಾಂಡ್‌ ಸ್ಕೇಪಿಂಗ್‌, ಕೂರಲು ಬೆಂಚ್‌ಗಳು ಮತ್ತು ದೀಪಗಳ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಕಾಮಗಾರಿಯ ಎರಡನೇ ಹಂತದಲ್ಲಿ ನೆರಳು ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಬಣ್ಣದ ಕಾರಂಜಿಯೂ ನಿರ್ಮಾಣವಾಗಲಿದೆ. ಐದು ವರ್ಷಗಳ ನಿರ್ವಹಣೆ ನಂತರ ಪುಷ್ಕರಣಿ ಪಾಲಿಕೆಗೆ ಹಸ್ತಾಂತರವಾಗಲಿದೆ. 

ನಗರಕ್ಕೆ ಇನ್ನೊಂದು ಪ್ರೇಕ್ಷಣೀಯ ಸ್ಥಳ ಸಿಗುವ ಕುರಿತು ಮಾತನಾಡಿರುವ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಲಾಕ್‌ಡೌನ್‌ ಇರದಿದ್ದರೆ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿತ್ತು. ಮುಂದಿನ ದಿನಗಳಲ್ಲಿ ಪುಷ್ಕರಣಿಯನ್ನು ಮತ್ತಷ್ಟು ಸುಂದರವಾಗಿ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

error: Content is protected !!