ಜಗಳೂರಿನ ಟಾಸ್ಕ್‌ಫೋರ್ಸ್ ಸಭೆಯಲ್ಲಿ ತಹಶೀಲ್ದಾರ್ ಡಾ. ನಾಗಮಣಿ
ಜಗಳೂರು, ಮೇ 17- ಪಟ್ಟಣ, ಗ್ರಾಮಿಣ ಭಾಗದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಕಡಿವಾಣ ಹಾಕಲು ಅಧಿಕಾರಿಗಳು ಕೇಂದ್ರ ಸ್ಥಾನದ ಲ್ಲಿಯೇ ಇದ್ದು ಇಲಾಖೆಯ ಸಿಬ್ಬಂದಿಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಕೊರೊನಾ ಹೋಗಲಾಡಿಸಲು ಶ್ರಮ ವಹಿಸಲು ತಹಶೀಲ್ದಾರ್ ಡಾ. ನಾಗವೇಣಿ ಹೇಳಿದರು.
ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕ ಹೊಂದಿದ ಮಾಹಿತಿ ಕಲೆ ಹಾಕಬೇಕು. ಸೋಂಕಿತರು ಕಂಡುಬಂದರೆ ಗ್ರಾಮದ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯ ಕೊಠಡಿಯಿದ್ದರೆ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್‌ಲ್ಲಿರಲು ತಿಳಿಸಿ ಜಾಗೃತಿ ಮೂಡಿಸಿ. ಸೌಲಭ್ಯಇಲ್ಲದವರಿಗೆ ನಮ್ಮ ಹೆಲ್ತ್‌ಕೇರ್ ಸೆಂಟರ್‌ಗೆ ಬರುವಂತೆ ಆರೋಗ್ಯ ಇಲಾಖೆ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಹೋಗಿ ಜಾಗೃತಿ ಮೂಡಿಸಿ ಕರೆ ತರಬೇಕೆಂದರು.
ಪಟ್ಟಣ ಹಾಗೂ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ವಿವಿಧ ಬೀದಿಗಳಲ್ಲಿ ಪ್ರತಿ ನಿತ್ಯ ಸ್ಯಾನಿಟೈಸರ್ ಮಾಡಿ ಚರಂಡಿ ಸೇರಿದಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಸ್ವಚ್ಛತೆ ಕಾಪಾಡಬೇಕು ಎಂದರು.
ಈಗಾಗಲೇ 350 ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 170 ರೋಗಿಗಳು ಗುಣಮುಖರಾಗಿದ್ದಾರೆ, ಸಕ್ರಿಯವಾಗಿ 180 ಇದ್ದು, 6 ರಿಂದ 7 ಜನ ಮೃತಪಟ್ಟಿದ್ದಾರೆ ಎಂದರು.
ತಾ.ಪಂ. ಇಓ ಮಲ್ಲನಾಯ್ಕ್ ಮಾತನಾಡಿ, ಆಶಾ ಕಾರ್ಯಕರ್ತರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ವರದಿ ನೀಡಲು ಸೂಚಿಸಿದ್ದೇವೆ.
ಈ ಸಂದರ್ಭದಲ್ಲಿ ಪ್ರಭಾರ ತಹಶೀಲ್ದಾರ್ ಮಂಜಾನಂದ, ಬಿಳಿಚೋಡು ಠಾಣೆ ಪಿಎಸ್‌ಐ ಶೈಲಾಶ್ರೀ, ಪ.ಪಂ. ಮುಖ್ಯಾಧಿಕಾರಿ ರಾಜು ಬಣಕಾರ್, ನೋಡಲ್ ಅಧಿಕಾರಿಗಳಾದ ವೆಂಕಟೇಶ್ ಮೂರ್ತಿ, ರುದ್ರಪ್ಪ, ಲಿಂಗರಾಜ್, ಸಹಾಯಕ ನೋಡಲ್ ಅಧಿಕಾರಿ ಬಿ. ಮಹೇಶ್ವರಪ್ಪ ಸೇರಿದಂತೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.