ದಾವಣಗೆರೆ, ಜು.28- ರಾಜ್ಯದ ಎಲ್ಲಾ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ (ಎಐಡಿಎಸ್‍ಓ) ಜಿಲ್ಲಾ ಸಮಿತಿ, ಡಿಪ್ಲೋಮಾ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.
ಶ್ರೀ ಜಯದೇವ ಮುರುಘಾ ರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಡಿಪ್ಲೋಮಾ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಳೆದ ಒಂದು ತಿಂಗಳಿಂದ ಒಂದೇ ಸೆಮಿಸ್ಟರ್ ಪರೀಕ್ಷೆ ಪದ್ದತಿ ಜಾರಿ ಮಾಡುವಂತೆ ರಾಜ್ಯದ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ, ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆಗೆ ಆದೇಶ ಹೊರಡಿಸಲಾಗಿದೆ. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿದಿಲ್ಲ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಪೂಜಾ ಅಸಮಾಧಾನ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗ ವ್ಯಾಪಿಸಿರುವ ಇಂತಹ ಸಂದರ್ಭದಲ್ಲೂ 3ನೇ ವರ್ಷದ ವಿದ್ಯಾರ್ಥಿಗಳು 3 ಪರೀಕ್ಷೆ ಎದುರಿಸಲಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಸಹ ಒಂದೇ ಹಂತದ ಪರೀಕ್ಷೆ ಪದ್ದತಿ ಮಾಡಬೇಕು. ಯಾವುದಾದರೂ ಒಂದು ಸೆಮಿಸ್ಟರ್ ಪರೀಕ್ಷೆ ರದ್ದು ಮಾಡಬೇಕು. ಇದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳೀಗೆ ಮಾನಸಿಕ ಒತ್ತಡ ಕಡಿಮೆ ಆಗಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಂಟಿ ಕಾರ್ಯದರ್ಶಿ ಕಾವ್ಯ, ಪ್ರೀತಿ ಸೇರಿದಂತೆ ದಾವಣಗೆರೆ, ಹರಿಹರ ಅವಳಿ ನಗರಗಳ ಡಿಪ್ಲೋಮಾ ಕಾಲೇಜುಗಳಾದ ಡಿಆರ್‍ಆರ್, ಎಸ್‍ಜೆವಿಪಿ, ಬಿಐಇಟಿ, ಜಿಎಂಐಟಿ ಪಾಲಿಟೆಕ್ನಿಕ್‍ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.