ಆಕ್ಸಿಜನ್ ಬೇಡಿಕೆ ಏರಿಕೆ : ಹರಿಹರದಲ್ಲಿ ಸಾಲುಗಟ್ಟಿ ನಿಂತ ವಾಹನಗಳು

ಹರಿಹರ, ಮೇ 10- ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಆಕ್ಸಿಜನ್ ಪೂರೈಸುವ ಖಾಸಗಿ ಸಂಸ್ಥೆ ಕಾರ್ಯನಿರ್ವಹಿಸದ ಕಾರಣ ನಗರದ ಆಸ್ಪತ್ರೆಗಳಿಗೆ ಪೂರೈಸುವ ಆಕ್ಸಿಜನ್ ಮೇಲೆ ಒತ್ತಡ ಬಿದ್ದಿದೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಗಳಿಗೆ ಪ್ರಮುಖವಾಗಿ ಆಕ್ಸಿಜನ್ ಪೂರೈಸುವ ರೇಣುಕಾ ಗ್ಯಾಸ್ ವಿತರಣಾ ಕೇಂದ್ರ ಚಾಲನೆಯಲ್ಲಿ ಇಲ್ಲದಿರುವುದರಿಂದ ಆಕ್ಸಿಜನ್˝ಗೆ ಹರಿಹರದ ಸದರನ್ ಗ್ಯಾಸ್ ಲಿಮಿಟೆಡ್ ಬಳಿ ತೆರಳುವಂತಾಗಿದೆ.

ಸದರನ್ ಗ್ಯಾಸ್ ಲಿಮಿಟೆಡ್‌ಗೆ ಆಕ್ಸಿಜನ್ ವಿತರಣೆ ಮಾಡುವಂತೆ ಬಹಳ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಬಂದಿರುವುದರಿಂದ ಜಿಲ್ಲೆಯಲ್ಲಿ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಆಗದಂತೆ ಗಮನ ಹರಿಸಲು ದಾವಣಗೆರೆ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ವೀರೇಶ್, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಸತೀಶ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಹರಿಹರ ನಗರದಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇರುವ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಆಕ್ಸಿಜನ್ ಸರಬರಾಜಾಗುತ್ತದೆ. ಈ ಸಂಸ್ಥೆಯ ಮುಂದೆ ಭಾರೀ ವಾಹನಗಳು ಆಕ್ಸಿಜನ್ ಗಾಗಿ ಸಾಲಿನಲ್ಲಿ ನಿಂತಿವೆ. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಇಲ್ಲಿನ ಸ್ಥಳೀಯ ಅಧಿಕಾರಿಗಳಾದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಹಾಗೂ ಸಿಪಿಐ ಸತೀಶ್ ಕುಮಾರ್‌ರವರಿಗೆ  ಸ್ಥಳದಲ್ಲಿಯೇ ಇದ್ದು ದಾವಣಗೆರೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. 

ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಸಾಗಿಸುವ ವಾಹನವನ್ನು ಪೊಲೀಸ್ ಭದ್ರತೆಯ ಮೂಲಕ ತಲುಪಿಸಲಾಗುತ್ತಿದೆ.

ಸದರನ್ ಗ್ಯಾಸ್ ಏಜೆನ್ಸಿಗೆ  ಬಳ್ಳಾರಿಯ ಜಿಂದಾಲ್ ಕಂಪನಿಯ ಮೂಲಕ ನೇರವಾಗಿ ದಿನಕ್ಕೆ 18.5 ಟನ್ ಆಕ್ಸಿಜನ್ ಸರಬರಾಜಾಗುತ್ತಿದ್ದು, ಅದರಲ್ಲಿ ದಾವಣಗೆರೆ ಸಿಜೆ ಆಸ್ಪತ್ರೆಗೆ 6 ಟನ್ ಹಾಗೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ 4 ಟನ್ ಸರಬರಾಜು ಆಗುತ್ತಿದೆ. ಇದರ ಜೊತೆಗೆ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಇಲ್ಲಿಂದಲೇ ಪ್ರಾಣವಾಯು ಸರಬರಾಜಾಗುತ್ತಿದೆ. ಮೊದಲು ಖಾಸಗಿ ಆಸ್ಪತ್ರೆಯವರಿಂದ 10 ರಿಂದ 15 ಆಕ್ಸಿಜನ್ ಸಿಲಿಂಡರ್‌ಗೆ ಬೇಡಿಕೆ ಇರುತ್ತಿತ್ತು. ಆದರೆ ಕೊರೊನಾ ರೋಗಿಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನಕ್ಕೆ 40 ರಿಂದ 50 ಸಿಲಿಂಡರ್‌ಗಳ ಬೇಡಿಕೆ ಇದೆ. ಸದ್ಯಕ್ಕೆ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಶೇಖರಿಸಿಡಲು ಸದರನ್‌ ಏಜೆನ್ಸಿಯಲ್ಲಿ ಆಕ್ಸಿಜನ್ ಶೇಖರಣಾ ಘಟಕದ ಕೊರತೆ ಇದೆ. ಪ್ರಸ್ತುತ ದಾವಣಗೆರೆಯ ರೇಣುಕಾ ಗ್ಯಾಸ್ ವಿತರಣಾ ಕೇಂದ್ರವು ಚಾಲನೆಯಲ್ಲಿ ಇರದ ಕಾರಣ ಸದರನ್‌ಗೆ ಬೇಡಿಕೆಯ ಪ್ರಮಾಣ ಇನ್ನೂ ಹೆಚ್ಚಾಗಿದೆ. 

ಆಕ್ಸಿಜನ್ ಕೊರತೆ ಬರದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಳ್ಳಾರಿ ಜಿಂದಾಲ್ ಕಂಪನಿಯಿಂದ ಆಕ್ಸಿಜನ್ ತಲುಪಲು ಸಮಯವಾಗಲಿದೆ ಎಂಬುವುದನ್ನು ಬಿಟ್ಟರೆ,  ಉಳಿದೆಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಪ್ರೊಬೇಷನರಿ  ಉಪವಿಭಾಗಧಿಕಾರಿ ವೀರೇಶ್ ಹೇಳಿದ್ದಾರೆ. 

ದಾವಣಗೆರೆ ಜಿಲ್ಲೆಯ ಅಗತ್ಯತೆಗೆ ತಕ್ಕಂತೆ ಜಿಂದಾಲ್˝ನಿಂದ ಆಕ್ಸಿಜನ್ ಸರಬರಾಜು ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹನುಮತರಾಯ ಅವರ ಸೂಚನೆಯಂತೆ ರೋಗಿಗಳಿಗೆ ಆಕ್ಸಿಜನ್ ಕೊರತೆ ಬರದಂತೆ ನೋಡಿಕೊಳ್ಳಲು ನಾವೇ ಖುದ್ದಾಗಿ ಆಕ್ಸಿಜನ್ ಸರಬರಾಜು ಮಾಡುವ ವಾಹನಗಳನ್ನು ಆಸ್ಪತ್ರೆಯ ಆವರಣಕ್ಕೆ ಬಿಟ್ಟು ಬರುತ್ತಿರುವುದಾಗಿ ಸಿಪಿಐ ಸತೀಶ್ ಕುಮಾರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗುತ್ತೂರು ಪೊಲೀಸ್ ಠಾಣೆಯ ಪಿಎಸ್ಐ ಡಿ. ರವಿಕುಮಾರ್, ಸದರನ್ ಗ್ಯಾಸ್ ಏಜೆನ್ಸಿ ಮ್ಯಾನೇಜರ್ ಎ. ನಾಗರಾಜ್, ಇಂಜಿನಿಯರ್ ಮಧುಕೇಶವ, ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ್, ಕರಿಯಪ್ಪ, ಕಂದಾಯ ಇಲಾಖೆಯ ಕಿರಣ್, ಇನ್ನಿತರರು ಹಾಜರಿದ್ದರು.


– ಚಿದಾನಂದ ಎಂ. ಕಂಚಿಕೇರಿ,
[email protected]

error: Content is protected !!