ದಾವಣಗೆರೆ, ಜು.28- ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಮೋಟಾ ರ್‌ಳನ್ನು ಚಾಲನೆಗೊಳಿಸುವಂತೆ ಆಗ್ರಹಿಸಿ ನಗರದಲ್ಲಿಂದು 22 ಕೆರೆಗಳ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
22 ಕೆರೆಗಳ ಏತ ನೀರಾವರಿ ಯೋಜನೆಯು ಪ್ರತಿ ವರ್ಷ 6 ತಿಂಗಳು ನಡೆಯಬೇಕಾಗಿರುತ್ತದೆ. ಆದರೆ, 2020-21ನೇ ಸಾಲಿನಲ್ಲಿ ಯಾವ ಕಡೆಗೂ ಅರ್ಧ ಅಡಿ ನೀರು ಬಂದಿಲ್ಲ.
ಈ ಯೋಜನೆಯು 2021-22ನೇ ಸಾಲಿನಲ್ಲಿ ತುಂಗಭದ್ರಾ ನದಿಯಲ್ಲಿ ಮೋಟಾರ್ ಚಾಲನೆಗೊಳ್ಳಲು ಬೇಕಾದ ಅಗತ್ಯ ಪ್ರಮಾಣದ ನೀರು ಕಳೆದ 30 ದಿನಗಳಿಂದ ಲಭ್ಯವಿದೆ. ಆದರೂ ಸಹ ಇಲ್ಲಿಯವರೆಗೂ ಮೋಟಾರ್ ಚಾಲನೆಯಾಗಿಲ್ಲ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎಲ್. ಕೊಟ್ರೇಶ್ ನಾಯ್ಕ ಹುಲಿಕಟ್ಟೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂ ತೇಶ್ ಬೀಳಗಿ ಬಳಿ ಮನವಿ ನೀಡುವುದರ ಜೊತೆಗೆ ಅಳಲಿಡಲಾಯಿತು.
ಈ ಬಗ್ಗೆ ಅಭಿಯಂತರರಿಗೆ ಕೇಳಿದರೆ ಪ್ರಾರಂಭವಾಗಿದ್ದು, ಪೈಪ್ ಹೊಡೆದಿದೆ. ರಿಪೇರಿ ಕೆಲಸ ನಡೆಯುತ್ತಿದೆ ಎಂದು ಕಳೆದ 45 ದಿನಗಳಿಂದ ಸಬೂಬು ಹೇಳುತ್ತಿದ್ದಾರೆ. ಈ ಹಿಂದೆ ಕಾಮಗಾರಿ ಮಾಡಿದ ಎಲ್ ಅಂಡ್ ಟಿ ಯವರ ಕಳಪೆ ಕೆಲಸ ಮತ್ತು ಭರಮಸಾಗರ ಕೆರೆಗಳಿಗೆ ನೀರು ಹರಿಸುವ ಹೊಸ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಕೂಡ ನಮ್ಮ 22 ಕೆರೆಗಳ ಯೋಜನೆಗೆ ತೊಂದರೆಯಾಗಿದೆ. ಅಲ್ಲದೇ ಸ್ಥಳಾಂತರ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿಯವರ ಕಳಪೆ ಕೆಲಸದಿಂದ ಕೂಡ ಪೈಪ್ ಲೈನ್ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಿರುವ ಪೈಪ್ ಲೈನ್ ಬದಲಿಸಿ ಹೊಸ ಪೈಪ್ ಲೈನ್ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ಶೀಘ್ರವೇ 22 ಕೆರೆಗಳ ಯೋಜನೆ ಪ್ರಗತಿ ಕಂಡು ನೀರು ಹರಿಸುವಂತೆ ಜಿಲ್ಲಾಡಳಿತದ ಮುಖಾಂತರ ಸರ್ಕಾರ ಹಾಗೂ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ, ಮುಖಂಡರುಗಳಾದ ನೇರ್ಲಿಗಿ ಸ್ವಾಮಿ, ತುಪ್ಪದಹಳ್ಳಿ ಶಿವಕುಮಾರ್, ಹೇಮಂತ್ ರಾಜ್ ಆಲೂರು, ತುಂಬಿಗೆರೆ ಸಿದ್ದೇಶ್, ಆನಗೋಡು ಮಲ್ಲಿಕಾರ್ಜುನ್, ರೈತ ಮುಖಂಡರುಗಳಾದ ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಬಲ್ಲೂರ್ ರವಿಕುಮಾರ್, ಆಲೂರು ಶಿವಣ್ಣ, ದಾನಪ್ಪ ಅಣಜಿ, ಆನಗೋಡು ಮಲ್ಲಿಕಾರ್ಜುನ, ಹೊನ್ನಪ್ಪ, ಪ್ರಕಾಶ್ ಪಾಟೀಲ್, ಶಿವಣ್ಣ ಆಲೂರು, ತುಂಬಿಗೆರೆ ಸ್ವಾಮಿ, ಬಸವಂತಪ್ಪ ಸೇರಿದಂತೆ ಇತರರು ಇದ್ದರು.