ಮುಂಜಾಗ್ರತೆಗಾಗಿ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ನಿರ್ಣಯ

ತಾಲ್ಲೂಕು ಟಾಸ್ಕ್‌ಫೋರ್ಸ್  ಸಭೆಯಲ್ಲಿ ನಿರ್ಧಾರ

ದಾವಣಗೆರೆ, ಮಾ. 12- ಮುಂಜಾ ಗ್ರತಾ ಕ್ರಮವಾಗಿ ತಾಲ್ಲೂಕಿನಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿ ಸಲು ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲ್ಲೂಕು ತಹಸೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಎಲ್.ಡಿ. ಅವರು,  ಈಗಾಗಲೇ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್‍ನ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದು, ಹೊರ ರಾಜ್ಯಗಳಿಂದ ಬರುವಂತಹ ಪ್ರಯಾಣಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸ ಬೇಕು.  ಮುಂದಾಗುವ ಅನಾಹುತವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಗಳು ಕಡಿಮೆ ಇದ್ದು ಯಥಾಸ್ಥಿತಿಯಲ್ಲಿ ನೋಡಿಕೊಳ್ಳಲು ಎಲ್ಲರ ಸಹಕಾರ ಬೇಕಿದೆ. ಶಿಕ್ಷಣ ಇಲಾಖೆಯವರು ಎಲ್ಲಾ ವಿದ್ಯಾರ್ಥಿ ಗಳಿಗೆ ಕೋವಿಡ್-19 ಪರೀಕ್ಷೆ ಮಾಡಿಸ ಬೇಕು. ಅದೇ ರೀತಿ ವಸತಿ ನಿಲಯಗಳು ಆರಂಭವಾಗಿರುವುದರಿಂದ ಎಲ್ಲಾ ವಸತಿ ನಿಲಯದ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸಮಾಜ ಕಲ್ಯಾಣ ಇಲಾಖೆ ಕ್ರಮ ವಹಿಸಬೇಕು ಎಂದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಎಲ್ಲಾ ನೌಕರರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು.  ಆಯಾ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಪ್ರಯೋಗ ಶಾಲಾ ತಂತ್ರಜ್ಞರು ಇದ್ದು ಅಲ್ಲಿಯೇ ಪರೀಕ್ಷೆ ಮಾಡಿಸಲು ಕೋರಿದರು.  

ನಗರದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವ ಸಹಾಯಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.

3 ನೇ ಹಂತದ ಲಸಿಕಾ ಕಾರ್ಯ ಮಾ.1 ರಿಂದ ಪ್ರಾರಂಭವಾಗಿದ್ದು , ಎಲ್ಲಾ ಇಲಾಖಾ ಸಿಬ್ಬಂದಿಯವರು ಲಸಿಕೆಯನ್ನು ಪಡೆಯಲು ಸಭೆಯಲ್ಲಿ ತಿಳಿಸಲಾಯಿತು.   ಗ್ರೇಡ್-2 ತಹಶೀಲ್ದಾರ್ ದೇವರಾಜ್ ಮಾತನಾಡಿ, ಎಲ್ಲ ಇಲಾಖೆಯವರು ತಮ್ಮ ಇಲಾಖೆ ಸಿಬ್ಬಂದಿಯವರ ಮಾಹಿತಿಯನ್ನು ಸಿದ್ಧಪಡಿಸಿ ಲಸಿಕೆಯನ್ನು ಪಡೆಯಲು ಮುಂದಾಗಬೇಕು. 2ನೇ ಹಂತದ ಅಲೆಯು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. 

 ಸಭೆಯಲ್ಲಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!