ದಾವಣಗೆರೆ, ಮೇ 16- ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅಂತೆಯೇ ಸೋಂಕಿತರ ಸಂಖ್ಯೆ ಏರಿಳಿತ ವಾಗುತ್ತಿದೆ. ಈ ಮಧ್ಯೆ ಭಾನುವಾರವಾದ ಇಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಜನರ ಓಡಾಟ ವಿರಳವಾಗಿತ್ತು.
ಸರ್ಕಾರದ ಲಾಕ್‍ಡೌನ್ ನಿಯಮ ಜಾರಿಯಾಗಿ ಇಂದಿಗೆ 7ನೇ ದಿನ. ಭಾನುವಾರ ಮಾರುಕಟ್ಟೆಯಲ್ಲಿ ಸದಾ ಜನರಿಂದ ನಗರ ತುಂಬಿರುತ್ತಿತ್ತು. ಆದರೆ ಇಂದು ಪರಿಸ್ಥಿತಿಯೇ ಬೇರೆಯಾಗಿತ್ತು. ಬೆಳಿಗ್ಗೆ 6 ರಿಂದ 10 ಗಂಟೆ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಿದ ಜನತೆ ಮನೆಯಲ್ಲೇ ಲಾಕ್ ಆಗಿದ್ದರು.
ಬೆಳಿಗ್ಗೆಯಿಂದಲೇ ಸಸ್ಯಹಾರಿಗಳು ತರಕಾರಿ, ಸೊಪ್ಪು ಸೇರಿದಂತೆ ಇನ್ನಿತರೆ ದಿನಸಿ ವಸ್ತುಗಳನ್ನು ಮನೆಗೆ ತಂದರೆ, ಇನ್ನು ಮಾಂಸಹಾರಿಗಳು ತಮ್ಮ ಹತ್ತಿರದ ಚಿಕನ್, ಮಟನ್, ಮೀನು ಮಾರುಕಟ್ಟೆಗಳಿಗೆ ಧಾವಿಸಿ ತಮಗೆ ಬೇಕಾದ್ದನ್ನು ಖರೀದಿಸಿ ವಾಪಸ್ಸಾದರು. ಅವಕಾಶದ ಸಮಯದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತೆ ಎಂದಿನಂತೆ ಮರೀಚಿಕೆಯಾಗಿತ್ತು.
10 ಗಂಟೆಯ ನಂತರವೂ ಅಲ್ಲಲ್ಲಿ ಅಲ್ಪಸ್ಪಲ್ಪ ಸಣ್ಣಪುಟ್ಟ ವ್ಯಾಪಾರ ವಹಿ ವಾಟು ನಡೆಸಿದರು. ನಿಗದಿತ ಸಮಯ ಮೀರಿದರೆ ಎಲ್ಲಿ ದಂಡ ಬೀಳುತ್ತದೆಯೋ ಎನ್ನುವ ಭಯದಲ್ಲಿ ವ್ಯಾಪಾರಸ್ಥರು ಆತಂ ಕದಲ್ಲೇ ಗ್ರಾಹಕರಿಗೆ ಹಿಂದೆ, ಮುಂದೆ ನೋಡುತ್ತಾ ಅವರಿಗೆ ಬೇಕಾದ ಸಾಮಗ್ರಿ ನೀಡುತ್ತಿದ್ದರು. ಇನ್ನು ಅಲ್ಲಲ್ಲಿ ನಗರದ ಒಳಭಾಗದಲ್ಲಿ ಚಿಕನ್, ಮಟನ್ ಅಂಗ ಡಿಗಳು ಮುಂಭಾಗದಲ್ಲಿ ತೆರೆಯದಿದ್ದರೂ ಹಿಂಭಾಗದ ಬಾಗಿಲುಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದುದು ಕಂಡುಬಂದಿತು.
ಲಾಕ್‍ಡೌನ್ ಜಾರಿಯಲ್ಲಿದ್ದರೂ ಅಷ್ಟಿಷ್ಟು ಜನರಿಂದ ಇರುತ್ತಿದ್ದ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಕೆ.ಆರ್. ಮಾರುಕಟ್ಟೆ, ಎಪಿಎಂಸಿ, ಹಳೇ ದಾವಣಗೆರೆಯ ಕೆಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು.
ಎಲ್ಲಾ ವೃತ್ತಗಳಲ್ಲಿ ಮಾಮೂಲಿನಂತೆ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ದ್ವಿಪಥ ರಸ್ತೆಗಳನ್ನು ಬಂದ್ ಮಾಡಿ, ಕೇವಲ ಏಕಮುಖವಾಗಿ ಸಂಚರಿಸು ವಂತೆ ವಾಹನ ಸವಾರರಿಗೆ ಸೂಚಿಸಲಾ ಗುತ್ತಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ಗಂಟೆಯೊಳಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಾರ್ವಜ ನಿಕರು ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ಮನೆಗಳತ್ತ ಸಾಗಿದರು. ಜನನಿಬಿಡ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂ ತೆಯೇ ಸಾರ್ವಜನಿಕರು ಮನೆಗಳಿಂದ ಹೊರಗೆ ಬಾರದೇ ಸಹಕರಿಸಿದ್ದಾರೆ.