ವ್ಯಾಯಾಮದಿಂದ ಖರ್ಚಿಲ್ಲದೇ ಮಿತಿ ಇಲ್ಲದ ಲಾಭ: ಸಿಇಒ

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

ದಾವಣಗೆರೆ, ಮಾ. 11 – ವ್ಯಾಯಾಮಕ್ಕೆ ಹಣವೇನೂ ಬೇಡ. ಆದರೆ, ಅದರಿಂದ ಮಿತಿಯಿಲ್ಲದ ಲಾಭ ಸಿಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ ಹೇಳಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ದಾವಣಗೆರೆ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ಕ್ರೀಡೆ ಪಠ್ಯೇತರ ಚಟುವಟಿಕೆಯಾಗಿತ್ತು. ಅದನ್ನು ಸಮಯ ಪೋಲು ಮಾಡಿದಂತೆ ಎಂದು ಪರಿಗಣಿಸಲಾಗುತ್ತಿತ್ತು. ಈಗ ಕ್ರೀಡೆ ಪಠ್ಯದ ಅವಿಭಾಜ್ಯ ಅಂಗವಾಗಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಅಭಿಯಾನ ನಡೆಸುತ್ತಿದೆ ಎಂದರು.

ದೈಹಿಕ ಕಸರತ್ತು ಕೇವಲ ಕ್ರೀಡಾಕೂಟಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ನಡಿಗೆ, ಓಟ, ಟ್ರೆಡ್‌ಮಿಲ್‌, ಈಜು ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.

ನಿರಂತರ ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಇದರಿಂದ ನಾಯಕತ್ವದ ಗುಣ ಸಿಗುತ್ತದೆ. ಸೋಲನ್ನು ಎದುರಿಸುವ ಸಾಮರ್ಥ್ಯ ಲಭ್ಯವಾಗುತ್ತದೆ ಎಂದೂ ಅವರು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಮಾತನಾಡಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಶಿಸ್ತು ಹಾಗೂ ಆದೇಶ ಪಾಲನೆಗೆ ಹೆಸರಾಗಿದ್ದ ಪೊಲೀಸ್ ಇಲಾಖೆ ಈಗ ಸಂಯಮ ಹಾಗೂ ಜನಸ್ನೇಹಿ ಗುಣಗಳನ್ನು ಮೈಗೂಡಿಸಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಒತ್ತಡ ನಿವಾರಣೆಗೆ ಕ್ರೀಡೆ ಉಪಯುಕ್ತ. ವ್ಯಾಯಾಮದಿಂದ ಒಳ್ಳೆಯ ವಿಚಾರ ಹಾಗೂ ಆಲೋಚನೆಗಳು ಬರುತ್ತವೆ ಎಂದ ಅವರು, ಸ್ಮಾರ್ಟ್ ಸಿಟಿ ವತಿಯಿಂದ ಪೊಲೀಸ್ ಇಲಾಖೆಗೆ ಮೂರು ಮಲ್ಟಿ ಸರ್ವೈಲೆನ್ಸ್ ವಾಹನಗಳನ್ನು ಒದಗಿಸಲಾಗಿದೆ. ಇನ್ನು ಒಂಭತ್ತು ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಇಡೀ ನಗರದ ಮೇಲೆ ನಿಗಾ ವಹಿಸುವ ನಿಯಂತ್ರಣ ಕೇಂದ್ರ ಸ್ಥಾಪನೆಯಾಗಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ವಾಗತಿಸಿದರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್ ವಂದಿಸಿದರು. ದೇವರಾಜ ಸಂಗೇನಹಳ್ಳಿ ಮತ್ತು ಶೈಲಜಾ ನಿರೂಪಿಸಿದರು.

error: Content is protected !!