ಪವಿತ್ರ ರಾಮಯ್ಯ
ಮಲೇಬೆನ್ನೂರು, ಮಾ.11- ನರೇಗಾ ಯೋಜನೆಯಡಿ ಭದ್ರಾ ಹಾಗೂ ದೇವರಬೆಳಕೆರೆ ಪಿಕಪ್ ಕಾಲುವೆಗಳ ಹೂಳು ತೆಗೆಸಲು ಕ್ರಮ ವಹಿಸಿ ಎಂದು ಜಿ.ಪಂ. ಹಾಗೂ ಗ್ರಾ.ಪಂ.ಗಳಿಗೆ ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಹೇಳಿದರು.
ಅವರು ಭಾನುವಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾ.ಪಂ. ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇವರಬೆಳಕೆರೆ ಪಿಕಪ್ ಕಾಲುವೆಗಳು ಹೂಳು ತುಂಬಿಕೊಂಡಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕಾಲುವೆಗಳ ಹೂಳು ತೆಗೆಸಲು ಕ್ರಿಯಾ ಯೋಜನೆಯಲ್ಲಿ ಸೇರಿಸಿ, ಜಿ.ಪಂ. ನಿಂದ ಅನುಮತಿ ಪಡೆಯಿರಿ ಎಂದು ಪಿಡಿಓ ನಾಗರಾಜ್ ಸಾರಥಿ ಅವರಿಗೆ ಹೇಳಿದರು.
ಈ ಹಿಂದೆ ದಾವಣಗೆರೆ ಜಿ.ಪಂ. ಸಿಇಓ ಆಗಿದ್ದ ಪದ್ಮಾ ಬಸವಂತಪ್ಪ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾಗ ಅವರು ನರೇಗಾ ಯೋಜನೆಯಡಿ ಕಾಲುವೆಗಳ ಹೂಳು ತೆಗೆಸಲು ಒಪ್ಪಿಗೆ ನೀಡಿದ್ದರು.
ಉತ್ಸಾಹಿ ಯುವಕರಾದ ವಾಗೀಶ್ ಸ್ವಾಮಿ ಅವರು ಈ ಭಾಗದ ಜಿ.ಪಂ. ಸದಸ್ಯ ರಾಗಿರುವುದರಿಂದ ಡಿ.ಬಿ. ಕೆರೆಯ ಪಿಕಪ್ ಕಾಲುವೆಗಳ ಹೂಳು ತೆಗೆಸಲು ಆಸಕ್ತಿ ವಹಿಸಿ ರುವುದು ತುಂಬಾ ಸಂತೋಷ ತಂದಿದೆ.
ನಾನೂ ಸಹ ಮುಖ್ಯಮಂತ್ರಿಗಳ ಬಳಿ ಭದ್ರಾ ಕಾಡಾಕ್ಕೆ ವಿಶೇಷ ಅನುದಾನ ನೀಡು ವಂತೆ ಮನವಿ ಮಾಡಿದ್ದೇನೆ. ಕೊರೊನಾ ಕಾರ ಣದಿಂದಾಗಿ ವಿಳಂಬವಾಗಿದೆ. ಅನುದಾನ ಬಂದ ತಕ್ಷಣ ಕೊನೆ ಭಾಗದ ಕಾಲುವೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆಂದರು.
ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ. ನನ್ನಲ್ಲಿರುವ ಇಚ್ಛಾಶಕ್ತಿಯಿಂದಾಗಿ ನಾನು ರೈತರ ಸಮಸ್ಯೆ ಕೇಳಿ, ಸಾಧ್ಯವಾದರೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಆಲೋಚನೆ ಯಾವತ್ತೂ ರೈತರ ಪರವಾಗಿ ಇರುತ್ತದೆ.
ಭದ್ರಾ ಡ್ಯಾಂ ಕಟ್ಟಿರುವುದು 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಕೊಡುವುದಕ್ಕಾಗಿ ಎಂಬುದನ್ನು ಅಧಿಕಾರದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕು. ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಒದಗಿಸಲೇಬೇಕೆಂದು ಸಂಕಲ್ಪ ಮಾಡಿದ್ದೆ. ಇದರಲ್ಲಿ ಯಶಸ್ವಿಯಾಗಿದ್ದೇನೆಂಬ ತೃಪ್ತಿ ನನಗಿದೆ.
ನೇತ್ರಾವತಿ ನದಿಯೂ ಭದ್ರಾ ಕಾಡಾ ವ್ಯಾಪ್ತಿಗೆ ಬರುತ್ತದೆ. ಅದಕ್ಕಾಗಿ ನಾನು ನದಿಗೆ ಭೇಟಿ ನೀಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಅವರ ಆಲೋಚನೆ ಹಾಗೂ ಸಲಹೆಗಳನ್ನು ಪಡೆದುಕೊಂಡು ಬಂದಿದ್ದೇನೆ. ಅವರ ಸಲಹೆಗಳು ರೈತರಿಗೆ ಬಹಳ ಉಪಯುಕ್ತವಾಗಿದ್ದು, ಹಂತ ಹಂತವಾಗಿ ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ.
ನಾನು ಇಂಜಿನಿಯರ್ಗಳ ಬಳಿ ಕಮೀ ಷನ್ ಕೇಳಿಲ್ಲ. ಅವರಿಂದ ಕೆಲಸ ತೆಗೆದು ಕೊಂಡಿದ್ದೇನೆ. ಇಂಜಿನಿಯರ್ಗಳೂ ಸಹ ನನ್ನ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ. ಭತ್ತ ಕಟಾವಿಗೆ ಬರುವವರಿಗೆ ಅವರನ್ನು ಮಲಗುವುದಕ್ಕೆ ಬಿಡಲ್ಲ, ನಾನೂ ಮಲಗುವು ದಿಲ್ಲ ಎಂದು ಪವಿತ್ರ ರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಟಿ.ಪಿ. ಧನ್ಯಕುಮಾರ್ ಅವರು ಭದ್ರಾ ನಾಲಾ ನಂ-3 ವಿಭಾಗದ ಇಇ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದಂತೆ ಮನವಿ ಮಾಡಿದರು.
ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ಸ್ವಾಮಿ ಮಾತನಾಡಿ, ಕಾಡಾ ಅಧ್ಯಕ್ಷರು ಬಹಳ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಕೊನೆ ಭಾಗದ ರೈತರ ಬಗ್ಗೆ ಈಗಿರುವ ಕಾಳಜಿ ಭತ್ತ ಕಟಾವಿಗೆ ಬರುವ ತನಕ ಇರುತ್ತದೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಕೊನೆ ಭಾಗದ ರೈತರು ಈ ಬಾರಿ ನೀರಿನ ಬಗ್ಗೆ ಚಿಂತೆ ಮಾಡುವುದು ಬೇಡ ಎಂದರು.
ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಕೊಟ್ರೇಶ್, ಭದ್ರಾ ನಾಲಾ ನಂ. 3 ವಿಭಾಗದ ಇಇ ಚಿದಂಬರ್ಲಾಲ್, ಎಇಇ ಸಂತೋಷ್, ಸಿರಿಗೆರೆಯ ತಿಪ್ಪೇರುದ್ರಪ್ಪ, ಪಾಲಾಕ್ಷಪ್ಪ, ಭಾನುವಳ್ಳಿಯ ಹೆಚ್.ಎಸ್. ಕರಿಯಪ್ಪ, ಪವಾಡಿ ಮಂಜಪ್ಪ ಹಾಗೂ
ಗ್ರಾ.ಪಂ. ಸದಸ್ಯರು ಹಾಜರಿದ್ದರು.