ದಾವಣಗೆರೆ, ಮಾ.11- ಬೆಳಿಗ್ಗೆಯಿಂದಲೇ ರಾತ್ರಿಯ ಜಾಗರಣೆಗೆ ತಯಾರಿ, ಪೂಜಾ ಸಾಮಗ್ರಿಗಳು, ಹಣ್ಣು, ಹೂ ಖರೀದಿ. ಸಂಜೆಯಾಗುತ್ತಲೇ ಎಲ್ಲೆಡೆ ಓಂ ಕಾರದ ಝೇಂಕಾರ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಓಂ ನಮಃ ಶಿವಾಯ ಮಂತ್ರ ಪಠಣ.
ಹೌದು, ನಗರದಲ್ಲಿ ಶಿವರಾತ್ರಿ ಆಚರಣೆಯನ್ನು ಸಂಭ್ರಮ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಶಿವನ ದೇವಾಲಯಗಳನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆ ಯಿಂದಲೇ ಕೈಲಾಸವಾಸಿಗೆ ವಿಶೇಷ ಪೂಜೆ, ಹೋಮಗಳು ನಡೆದವು. ಶಿವನಿಗೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು.
ಮನೆಗಳಲ್ಲಿ ವಿಶೇಷ ಪೂಜೆ, ಶಿವನಿಗೆ ಅಭಿಷೇಕ ನಡೆಸಿ, ನೈವೇದ್ಯ ಸಮರ್ಪಿಸಲಾಯಿತು. ಸಂಜೆಯಾಗುತ್ತಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನ ದರುಶನ ಪಡೆದರು. ಹಲವೆಡೆ ದೇವಸ್ಥಾನಗಳಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ತಡ ರಾತ್ರಿ ವರೆಗೆ ದೇವಸ್ಥಾನಗಳ ಮುಂದೆ ಭಕ್ತರ ಜಾತ್ರೆಯೇ ನೆರೆದಿತ್ತು.
ಇತ್ತ ನಗರದ ವಿವಿಧ ಬಡಾವಣೆಗಳಲ್ಲಿ ಜಾಗರಣೆ ನೆಪದಲ್ಲಿ ಚಿಕ್ಕ ಮಕ್ಕಳು, ಯುವಕರು, ಯುವತಿಯರು ವಿವಿಧ ಆಟಗಳಲ್ಲಿ ತೊಡಗಿಸಿ ಕೊಂಡಿದ್ದರು. ಚೆಸ್, ಕೇರಂ, ಷಟಲ್ ಬ್ಯಾಟ್, ಕ್ರಿಕೆಟ್ ಹೀಗೆ ಆಟಗಳು ನಡೆದಿದ್ದವು. ಇಂದು ಮತ್ತೆ ಕೆಲಸ ಕಾರ್ಯಗಳಿಗೆ ತೆರಳಬೇಕಾದವರು ಜಾಗರಣೆಯಿಂದ ದೂರವೇ ಉಳಿದು, ಎಂದಿನಂತೆ ನಿದ್ರೆಗೆ ಜಾರಿದ್ದರು.
ಗುರುವಾರ ಮುಂಜಾನೆಯೇ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಮಾರಾಟದ ಭರಾಟೆ ಹೆಚ್ಚಾಗಿತ್ತು. ವಿಶೇಷವಾಗಿ ಖರಬೂಜ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ಕಾಣಸಿಗುತ್ತಿತ್ತು. ಶಿವನ ಪೂಜೆ, ಅಭಿಷೇಕಕ್ಕೆ ಬೇಕಾದ ಅರ್ಘ್ಯ, ಬಿಲ್ವಪತ್ರೆ ಇತರೆ ವಸ್ತುಗಳನ್ನು ಕೆಲವು ಭಕ್ತರು ಉಚಿತವಾಗಿ ವಿತರಿಸಿದರು.
ದೇವಸ್ಥಾನದಲ್ಲಿ ಭಕ್ತರ ಜಾತ್ರೆ: ನಗರದ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಶಿವನ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆಯಿಂದ ತಡ ರಾತ್ರಿ ವರೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.
ಪಿ.ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಪುಷ್ಪಾಲಂಕಾರ ನಡೆಯಿತು. ಸಂಜೆ ಜಾಗರಣೆ ನಂತರ ಫಲಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು. ಸಂಜೆ ಈಶ್ವರ ಲಿಂಗುವಿಗೆ ಆರ್ಯವೈಶ್ಯ ಕುಲಬಾಂಧವರಿಂದ ಜಲಾಭಿಷೇಕ, ನಾಲ್ಕು ಯಾಮಗಳ ಅಖಂಡ ಪೂಜೆ ನಡೆಯಿತು.
ಹೊಂಡದ ವೃತ್ತದ ಬಳಿ ಇರುವ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲೂ ಮುಂಜಾನೆ ವಿಶೇಷ ಪೂಜಾದಿ ಕಾರ್ಯಗಳು ನಡೆದವು. ಸಂಜೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು.
ಜಯದೇವ ವೃತ್ತದಲ್ಲಿರುವ ಕೂಡಲಿ ಶೃಂಗೇರಿ ಜಗದ್ಗುರು ಮಹಾಸಂಸ್ಥಾನ ಶಾಖಾ ಮಠ ದಲ್ಲಿ ನಾಳೆ (ಮಾ.11) ಶಿವರಾತ್ರಿ ಅಂಗವಾಗಿ ಸಂಜೆ 6 ರಿಂದ 4 ಯಾಮ ಗಳಲ್ಲಿ ನಿರಂತರ ಅಭಿಷೇಕ ಎರ್ಪಡಿಸಲಾಗಿತ್ತು. ಸಂಜೆ ಭಕ್ತರಿಗೆ ಅಭಿಷೇಕಕ್ಕೆ ಅವಕಾಶ ನೀಡಲಾಗಿತ್ತು.
ವಿದ್ಯಾನಗರದ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಮುಂಜಾನೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ ನಡೆಯಿತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪಿ.ಜೆ. ಬಡಾವಣೆಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಸರಸ್ವತಿ ನಗರದ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಜಾಗರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.