ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಸ್ತುವಾರಿ ಡಾ. ಜಾಫರ್ ಖಾನ್ ಆರೋಪ
ದಾವಣಗೆರೆ, ಮಾ.11- ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾರಿಗೆ ಯೋಜನೆಗಳನ್ನು ತಲುಪಿಸದೆ ಜಾತಿ, ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಸ್ತುವಾರಿ ಡಾ. ಜಾಫರ್ ಖಾನ್ ಆರೋಪಿಸಿದರು.
ಅವರು, ಇಂದು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಘಟನೆಗಾಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷ ಸಂಘಟನೆಗಾಗಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಹೊಸ ದಿಕ್ಕು ಕಾರ್ಯಕ್ರಮ ಹಾಕಿಕೊಂಡಿದ್ದು, ಈ ಮೂಲಕ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಭಾರತ ಕೇವಲ ಒಂದು ಜಾತಿಯ ದೇಶವಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಹೀಗಾಗಿ ಎಲ್ಲ ರಿಗೂ ಸಮಾನ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು ಎಂದು ಆಶಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ವೈ. ಸೈಯದ್ ಅಹ್ಮದ್ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೊಟಕುಗೊಳಿಸಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರಗಳು ಬಜೆಟ್‍ನಲ್ಲಿ ನೀಡುತ್ತಿದ್ದ ಅನುದಾನವನ್ನು ಈ ಸರ್ಕಾರ ಕಡಿತ ಗೊಳಿಸುವ ಮೂಲಕ ಅಲ್ಪಸಂಖ್ಯಾತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್, ಜೆಡಿಎಸ್‍ನಲ್ಲಿದ್ದ 17 ಜನ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದಿದ್ದು, ಇದೊಂದು ದೌರ್ಜನ್ಯದ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಬೆಂಬಲದಿಂದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ದೇಶದ ಎಲ್ಲಾ ಜನತೆಯ ಮತಗಳು ವಿಭಜನೆಯಾಗುತ್ತಿವೆ. ಮುಸ್ಲಿಂ ಬಾಂಧವರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ಅನುದಾನ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ಒಂದೂವರೆ ಸಾವಿರ ಕೋಟಿ ರೂ.ಗೆ ಇಳಿಸಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸಲ್ಮಾನರು ಬೆನ್ನೆಲುಬಾಗಿ ನಿಂತಿದ್ದು, ನಮ್ಮ ಸಮುದಾಯದ ನಾಯಕರು ಪಕ್ಷದ ವರಿಷ್ಠರಿಗೆ ಹೇಳಿ ನಮ್ಮ ಯುವ ಕಾರ್ಯಕರ್ತರಿಗೆ ಸ್ಥಾನ-ಮಾನ ಕೊಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಅಯೂಬ್ ಪೈಲ್ವಾನ್, ಸಿರಾಜ್ ಅಹ್ಮದ್, ಚಮನ್ ಸಾಬ್, ಅಬ್ದುಲ್ ಲತಿಫ್ ಸೇರಿದಂತೆ ಇತರರು ಇದ್ದರು.