ಅನಾವಶ್ಯಕವಾಗಿ ರಸ್ತೆಗಿಳಿಯುವವರ ಮೇಲೆ ಹದ್ದಿನ ಕಣ್ಣು
ದಾವಣಗೆರೆ, ಮೇ 10- ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಸೋಮವಾರದಿಂದ ಕಠಿಣ ಲಾಕ್ಡೌನ್ ಜಾರಿಗೊಳಿಸಿದ್ದು, ಹಳೆಯ ಮೆಡಿಕಲ್ ರಸೀದಿ ಹಿಡ್ಕೊಂಡು, ಕುಂಟು ನೆಪ ಹೇಳ್ಕೊಂಡು ಅನಗತ್ಯವಾಗಿ ರಸ್ತೆಗೆ ಇಳಿದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಬಂಧಿಸಿ, ಜಾಮೀನು ರಹಿತ ಬಂಧನದ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುತ್ತದೆ.
ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ದಾವಣಗೆರೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ, ನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಎಲ್ಲರೂ ನಗರದ ಜಯದೇವ ವೃತ್ತದಲ್ಲಿ ಬೆಳಗಿನಿಂದ ಕಾರ್ಯಾಚರಣೆ ನಡೆಸಿ ವಾಹನಗಳ ತಪಾಸಣೆ ನಡೆಸಿ, ಅನಾವಶ್ಯಕವಾಗಿ ರಸ್ತೆಗಿಳಿದ ವಾಹನಗಳನ್ನು ಜಫ್ತಿ ಮಾಡಲಾಯಿತು. ಅನಗತ್ಯವಾಗಿ ಸಂಚರಿಸುವವರ ಮೇಲೆ ದಂಡ ವಿಧಿಸಿದರು. ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ಅಗತ್ಯ ಸೇವೆಗಳ ಹೆಸರಲ್ಲಿ ಜನರು ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದಾರೆ. ಈ ಹಿಂದೆ ನೀಡಲಾಗಿದ್ದ ಪಾಸುಗಳನ್ನೇ ಹಿಡಿದು ಅಡ್ಡಾಡುತ್ತಿದ್ದಾರೆ. ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದರೆ 5ರಿಂದ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಆಗಲೂಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯದೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸೋಮವಾರ ಕೆಲ ಕಾಲ ಸಡಿಲ ಕೊಡಲಾಗಿದೆ. ಮಂಗಳವಾರದಿಂದ ಯಾವುದೇ ಸಡಿಲತೆ ಇಲ್ಲ. ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ.ಎನ್. ಗಿರೀಶ್ ಎಚ್ಚರಿಕೆ ನೀಡಿದರು.
ಅಂಗಡಿ-ಮುಂಗಟ್ಟುಗಳು ಬಂದ್-ತಪ್ಪದ ವಾಹನಗಳ ಓಡಾಟ
ದಾವಣಗೆರೆ, ಮೇ 10- ಸರ್ಕಾರ ಲಾಕ್ಡೌನ್ ಘೋಷಿಸಿರುವ ಕಾರಣ ನಗರದಲ್ಲಿ ಇಂದು ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ವಾಹನಗಳ ಓಡಾಟ ಮಾತ್ರ ಸ್ವಲ್ಪ ಮಟ್ಟಿಗೆ ಕಂಡು ಬಂತು.
ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು.
ಅನಾವಶ್ಯಕವಾಗಿ ರಸ್ತೆಗಿಳಿದು ಆಸ್ಪತ್ರೆ ಹಳೇ ಚೀಟಿಗಳು, ಮೆಡಿಕಲ್ ಸ್ಲಿಪ್ ಇಟ್ಟುಕೊಂಡು, ಲಸಿಕೆ ಹಾಕಿಸುವುದಾಗಿ, ವಿಮಾ ಪಾಲಿಸಿ ಕಟ್ಟುವುದಾಗಿ, ತರಕಾರಿ, ದಿನಸಿ ತರುವುದಾಗಿ ಹೀಗೆ ಕುಂಟು ನೆಪ ಹೇಳಿ ಕಣ್ತಪ್ಪಿಸಿ ಓಡಾಟ ನಡೆಸಲು ಮುಂದಾದ ವಾಹನ ಸವಾರರಿಗೆ ವಾಹನ ಜಪ್ತಿ, ದಂಡದ ಬಿಸಿ ತಟ್ಟಿದೆ.
ನಗರದಲ್ಲಿರುವ ಮುಖ್ಯರಸ್ತೆಗೆ ವಾಹನ ಸಂಚಾರ ಮಾಡದಂತೆ ನಾಕಾಬಂಧಿಯನ್ನು ರಾತ್ರಿಯೇ ಮಾಡಲಾಗಿದೆ. ಕೇವಲ ಏಕ ಮುಖ ರಸ್ತೆಗಳಲ್ಲಿ ತುರ್ತು ಸಂದರ್ಭ ಮತ್ತು ಅವಶ್ಯಕ ಓಡಾಟಕ್ಕೆ ಅವಕಾಶ ಮಾಡಿಕೊಟ್ಟು ಉಳಿದೆಲ್ಲಾ ಕಡೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಲಾಗಿತ್ತು. ಪ್ರತಿ ವೃತ್ತಗಳಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಅನಾವಶ್ಯಕವಾಗಿ ರಸ್ತೆಗಿಳಿದ ವಾಹನ ಸವಾರರು ಪಕ್ಕದ ರಸ್ತೆ, ಇನ್ನಿತರೇ ರಸ್ತೆಗಳಿಂದ ಸುತ್ತಿಕೊಂಡು ಮುಖ್ಯ ರಸ್ತೆಗೆ ಆಗಮಿಸಿ ಓಡಾಟ ಮಾಡಿದರು. ಇದು ಅವಶ್ಯಕ ಮತ್ತು ತುರ್ತು ಓಡಾಟಕ್ಕೆ ತೊಂದರೆಯುಂಟಾಗಿತ್ತು.
ಅಗತ್ಯ ಸೇವೆಗಳ ಹೆಸರಲ್ಲಿ ಜನರು ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದರು. ಈ ಹಿಂದೆ ನೀಡಲಾಗಿದ್ದ ಪಾಸ್ ಗಳನ್ನೇ ಹಿಡಿದು ಅಡ್ಡಾಡುತ್ತಿದ್ದ ಪ್ರಸಂಗಗಳು ಕಂಡು ಬಂದವು. ಅನಾವಶ್ಯಕವಾಗಿ ಓಡಾಟ ಮಾಡುವ ಜನರನ್ನು ಪೊಲೀಸರು ವಿಚಾರಣೆ ನಡೆಸಿ, ಅವರ ವಾಹನಗಳನ್ನು ವಶಪಡಿಸಿಕೊಂಡರು. ಅನಾವಶ್ಯಕವಾಗಿ ರಸ್ತೆಗಿಳಿದ 259 ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಅವುಗಳನ್ನು ಪೊಲೀಸ್ ಕವಾಯತ್ತು ಮೈದಾನದಲ್ಲಿ ನಿಲ್ಲಿಸಿದರು. ಮಾಸ್ಕ್ ಧರಿಸದೇ ಓಡಾಡಿದ 591 ಪ್ರಕರಣಗಳ ದಾಖಲಿಸಿ 78, 600 ರೂ. ದಂಡ ವಸೂಲಿ ಮಾಡಲಾಗಿದೆ.
ಕೈ ಮುಗಿದ ಖಾಕಿ: ಲಾಕ್ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರಲ್ಲದೇ, ಹೊರಗೆ ಬರಬೇಡಿ ಎಂದು ಕೊನೆಗೆ ಕೈ ಮುಗಿದ ಘಟನೆ ನಗರದ ಸಂಗೊಳ್ಳಿ ರಾಯಣ್ಣ ರಸ್ತೆ ಬಳಿ ನಡೆದಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಮೆರೆಯಬೇಡಿ. ಅನಗತ್ಯ ಓಡಾಟ ಬೇಡ. ದಯವಿಟ್ಟು ನಾನು ನಿಮಗೆ ಕೈ ಮುಗಿಯುತ್ತೇನೆ. ಯಾರೂ ಕೂಡ ಹೊರಗೆ ಓಡಾಡಬೇಡಿ. ನಾವು ಎಷ್ಟಂತ ಹೊಡೆಯಬೇಕು, ಎಷ್ಟಂತ ವಾಹನ ಸೀಜ್ ಮಾಡಬೇಕು ಎಂದು ಪಿಎಸ್ಐ ಅರವಿಂದ್ ಕೈ ಮುಗಿದು ಬೇಡಿದರು.
- ಅನಾವಶ್ಯಕವಾಗಿ ರಸ್ತೆಗಿಳಿದ 259 ವಾಹನಗಳನ್ನು ವಶಕ್ಕೆ
- ಅನಾವಶ್ಯಕವಾಗಿ ರಸ್ತೆಗಿಳಿಯದಂತೆ ಕೈಮುಗಿದು ಕೋರಿಕೊಂಡ ಪೊಲೀಸರು
- ತಹಶೀಲ್ದಾರ್-ಮೇಯರ್-ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ
- ಕುಂಟು ನೆಪ ಹೇಳ್ಕೊಂಡು ರಸ್ತೆಗಿಳಿದರೆ ಜಾಮೀನು ರಹಿತ ಬಂಧನ-ಜೈಲು: ಎಚ್ಚರಿಕೆ
5 ರಿಂದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿಯಲ್ಲಿ ಒಂದು ಬಾರಿ ಪ್ರಕರಣ ದಾಖ ಲಾದರೆ ಜಾಮೀನು ರಹಿತ ಬಂಧನದ ಪ್ರಕರಣ ದಾಖಲಾಗುತ್ತದೆ. ಇಂತಿಷ್ಟೇ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕೆನ್ನುವ ನಿಯಮ ಇಲ್ಲ. ಅವರು ಮಾಡುವ ಅಪರಾಧ ಗಳ ಮೇಲೆ ಆಧರಿಸುತ್ತದೆ. ಕೆಲವರು ಅವರ ಕಚೇರಿಯ ಗುರುತಿನ ಚೀಟಿಗಳನ್ನು ದುರುಪ ಯೋಗ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಇಂತಹ ಪ್ರಕರಣಗಳು ದೃಢಪಟ್ಟರೆ 5ರಿಂದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು. ಈ ವಿಚಾರದಲ್ಲಿ ಸಮಯವನ್ನು ದುರು ಪಯೋಗ ಮಾಡಿಕೊಂಡರೆ ಪೊಲೀಸರ ಮುಖಾಂತರ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡುತ್ತಾರೆ. ಪ್ರಕರಣವು ವಿಚಾರಣೆ ನಡೆದು ಸಿವಿಲ್ ಕೋರ್ಟ್ನಲ್ಲಾಗಲೀ, ಹೈಕೋರ್ಟ್ನಲ್ಲಾಗಲೀ ಶಿಕ್ಷೆ ವಿಧಿಸುವ ಅಧಿಕಾರ ಆಯಾ ನ್ಯಾಯಮೂರ್ತಿಗಳ ಮೇಲೆ ಇರುತ್ತದೆ.
– ಬಿ.ಎನ್ .ಗಿರೀಶ್, ತಾಲ್ಲೂಕು ದಂಡಾಧಿಕಾರಿ.
ರೋಗಿಗಳ ಪರವಾಗಿ ಕೇವಲ ಒಬ್ಬರು ಮಾತ್ರ ಅಟೆಂಡರ್ ಓಡಾಡಬೇಕು. ಆಸ್ಪತ್ರೆ ಹೆಸರು ಹೇಳಿಕೊಂಡು ಅನಗತ್ಯವಾಗಿ ಓಡಾಡುವ ವ್ಯಕ್ತಿಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು. ಅಗತ್ಯ ಸೇವೆಗಳು ಎಂದು ಸುಮ್ಮನೆ ದ್ವಿಚಕ್ರವಾಹನ, ವಿವಿಧ ವಾಹನಗಳ ಮೇಲೆ ನಾಮಫಲಕ ಹಾಕಿಕೊಂಡು ಓಡಾಡುತ್ತಿದ್ದಾರೆ. ಇಂತಹವರ ವಿರುದ್ದ ಮಾತ್ರವಲ್ಲದೇ ಆಸ್ಪತ್ರೆ ಹಳೇ ಚೀಟಿಗಳು, ಮೆಡಿಕಲ್ ಸ್ಲಿಪ್ ಇಟ್ಟುಕೊಂಡು, ವಿಮಾ ಪಾಲಿಸಿ ಕಟ್ಟಲು, ತರಕಾರಿ, ದಿನಸಿ ತರುವುದಾಗಿ ಸುಮ್ಮನೇ ಓಡಾಡುತ್ತಿದ್ದಾರೆ. ಇದು ಸರಿಯಲ್ಲ. ಸಾರ್ವಜನಿಕರು ವಿನಾಕಾರಣ ಹೊರಗೆ ಬಂದು, ಸೋಂಕು ಹಚ್ಚಿಕೊಂಡು ಕುಟುಂಬಕ್ಕೆ ಹಚ್ಚದೆ ಮನೆಯಲ್ಲೇ ಇರಬೇಕು. ಮೊದಲನೇ ದಿನವಾದ್ದರಿಂದ ಸ್ವಲ್ಪ ಸಡಿಲಗೊಳಿಸಿದ್ದೇವೆ. ಮಂಗಳವಾರದಿಂದ ಕಠಿಣವಾಗಿ ನಿಯಮಗಳು ಜಾರಿಗೆ ಬರುತ್ತವೆ ಎಂದು ತಿಳಿಸಿದರು.
ಅನಾವಶ್ಯಕವಾಗಿ ಜನರು ಆನ್ಕೋವಿಡ್ ಡ್ಯೂಟಿ ಎಂದು ಹಾಕಿಕೊಂಡರೆ ಕೇಸು ಶತಸಿದ್ದ. ಆಸ್ಪತ್ರೆಗೆ ತೆರಳುವ ರೋಗಿಗಳ ಯೋಗಕ್ಷೇಮ ವಿಚಾರಿಸಲು ಒಬ್ಬ ವ್ಯಕ್ತಿಗೆ ಪಾಸ್ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವವರಿಗೆ, ವೈದ್ಯಕೀಯ ತುರ್ತು ಇರುವವರಿಗೆ, ಕೃಷಿಗಾಗಿ ಹೋಗುವುದಾದರೆ ಯಾವುದೇ ತಪ್ಪಿಲ್ಲ. ಅಂತಹವರನ್ನು ತಡೆಯದೇ ಇರಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಕೊರೊನಾದಿಂದ ಎಷ್ಟು ಜನ ಸಾಯುತ್ತಿದ್ದಾರೆ ಎನ್ನುವ ಬಗ್ಗೆ ಚಿಂತಿಸಿ, ರೋಗ ಬಂದರೆ ನೀವೂ ಸಾಯುತ್ತೀರಿ, ನಿಮ್ಮ ಕುಟುಂಬ, ಮಕ್ಕಳ ಬಗ್ಗೆ ಯೋಚಿಸಿ. ಮಾಡಿ ಹೊರಗಡೆ ಬರುವ ಮುನ್ನ ನೂರು ಬಾರಿ ಯೋಚನೆ ಮಾಡಿ ಹೊರಗೆ ಬನ್ನಿ. ರೋಗದ ಗಂಭೀರತೆ ಅರಿತು ಹೊರಗೆ ಬರಬೇಕೋ, ಬೇಡವೋ ಎನ್ನುವುದನ್ನು ಅರಿತು ಹೊರಗೆ ಬನ್ನಿ ಎಂದು ಕಿವಿಮಾತು ಹೇಳಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ವಿನಾಕಾರಣ ಜನರು ನಗರದಲ್ಲಿ ಓಡಾಟ ನಡೆಸುತ್ತಿದ್ದು, ಆಸ್ಪತ್ರೆಗಳಿಗೆ ಹೋಗುತ್ತಿದ್ದೇವೆ. ಲಸಿಕೆ ಹಾಕಿಸಿಕೊಳ್ಳಲು ಓಡಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನು ಸಾಕಷ್ಟು ಜನಕ್ಕೆ ಲಾಕ್ಡೌನ್ ಬಗ್ಗೆ ಗಂಭೀರತೆ ಬಂದಿಲ್ಲ. ಮಂಗಳವಾರದಿಂದ ಈ ನಿಯಮ ಮತ್ತಷ್ಟು ಬಿಗಿಯಾಗಲಿದೆ. ನಗರದಿಂದ ಹೊರಗೆ ಇರುವ ಕೆಲವು ಬಡಾವಣೆಗಳಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಮಂಗಳವಾರದಿಂದ ನಗರ ಪಾಲಿಕೆಯಿಂದ ಗಸ್ತು ಮಾಡುವ ಮೂಲಕ ಧ್ವನಿವರ್ಧಕದ ಮೂಲಕ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಬಡಾವಣೆ ಠಾಣೆಯ ಪಿಎಸ್ಐ ಅರವಿಂದ್, ಸಿಬ್ಬಂದಿಗಳಾದ ಹರೀಶ್ ರೆಡ್ಡಿ, ಸಿದ್ದೇಶ್, ಕಂದಾಯ ಇಲಾಖೆಯ ಶಿವಕುಮಾರ್, ಅಂಜಿನಪ್ಪ, ಅರುಣ್ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಇದ್ದರು.