ದಾವಣಗೆರೆ, ನ.10- ನಿಮ್ಮ ನಿಮ್ಮ ಮನೆಯಂಗಳದಂತೆ ನಗರವನ್ನೂ ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ವಿದ್ಯಾನಗರದ 1ನೇ ಬಸ್ ಸ್ಟ್ಯಾಂಡ್ ಬಳಿಯ ಮುಖ್ಯ ವೃತ್ತದಲ್ಲಿ ಬುಧವಾರ ಮುಂಜಾನೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ತಮ್ಮ ಮನೆಗಳ ಅಂಗಳವನ್ನು ಸ್ವಚ್ಛವಾ ಗಿಟ್ಟು ಕೊಳ್ಳುತ್ತಾರೆ. ಆದರೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಉಗುಳುತ್ತಾರೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯದ ದೃಷ್ಟಿಯಲ್ಲಿ ಎಲ್ಲರೂ ಸುರಕ್ಷಿತವಾಗಿರಬಹುದು ಎಂದು ಕಿವಿ ಮಾತು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಸರ್ಕಾರಗಳು ಕೋಟ್ಯಾಂತರ ರೂ. ಅನುದಾನ ನೀಡುತ್ತವೆ. ಮಹಾನಗರ ಪಾಲಿಕೆಯಿಂದಲೂ ಸ್ವಚ್ಛತೆಗಾಗಿ ಸಾಕಷ್ಟು ಹಣ ವಿನಿಯೋಗಿಸಲಾಗುತ್ತಿದೆ. ಪಾಲಿಕೆ ಮಹಾಪೌರರು, ಆಯುಕ್ತರು ಸ್ವಚ್ಛತೆಗಾಗಿ ಸಹಕರಿಸುತ್ತಿದ್ದಾರೆ. ನಗರದ ಸ್ವಚ್ಛತೆ ಕೇವಲ ಇಲಾಖೆಗಳ ಕರ್ತವ್ಯವಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ನಗರದ ಸ್ವಚ್ಛತೆಗೆೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರು ಸ್ವಚ್ಛತೆಗೆ ಸಹಕರಿಸುವ ಮೂಲಕ ಸ್ವಚ್ಛ ಭಾರತ್ ಮಿಷನ್‌ನ ಆಲ್ ಇಂಡಿಯಾ
ರಾಂಕಿಂಗ್‌ನಲ್ಲಿ ಹತ್ತರೊಳಗಿನ ಸ್ಥಾನವನ್ನು ದಾವಣಗೆರೆ ಪಡೆಯುವಂತಾಗಬೇಕು ಎಂದರು. ನಿತ್ಯ ಕಸ ಸಂಗ್ರಹಣೆಗಾಗಿ ಹೆಚ್ಚಿನ ವಾಹನಗ ಳನ್ನು, ನವೀನ ಯಂತ್ರಗಳನ್ನು ಪಾಲಿಕೆಯಿಂದ ಖರೀದಿಸಲಾ ಗಿದೆ. ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಸಾರ್ವಜನಿಕರು ಕಸ ವಿಂಗಡಿಸಿ ನೀಡಬೇಕು. ತಾವೇ ಕಸದ ಗಾಡಿಗೆ ಕಸ ಹಾಕಿದರೆ ಯಾವುದೇ ಶುಲ್ಕ ನೀಡುವಂತಿಲ್ಲ. ಆದರೆ ಕಾರ್ಮಿಕರು ಕಸ ತೆಗೆದುಕೊಂಡು ಹೋದರೆ 20-30 ರೂ. ಮಾತ್ರ ಶುಲ್ಕ ಕೊಡಬೇಕಾಗುತ್ತದೆ ಎಂದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಕರ ಪತ್ರ ವಿತರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಪ್ರವೀಣ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸದಸ್ಯರಾದ ಗೀತಾ ದಿಳ್ಯೆಪ್ಪ, ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ ಹಾಗೂ ಇತರರು ಉಪಸ್ಥಿತರಿದ್ದರು.