ಹೊನ್ನಾಳಿ: ಭತ್ತ ಖರೀದಿ ಕೇಂದ್ರಕ್ಕೆ ರೈಸ್ ಮಿಲ್ ಮಾಲೀಕರ ಒತ್ತಾಯ

ಹೊನ್ನಾಳಿ: ಭತ್ತ ಖರೀದಿ ಕೇಂದ್ರಕ್ಕೆ ರೈಸ್ ಮಿಲ್ ಮಾಲೀಕರ ಒತ್ತಾಯ - Janathavaniಹೊನ್ನಾಳಿ, ನ.10-  ಭತ್ತ ಖರೀದಿ ಕೇಂದ್ರ ವನ್ನು ತೆರೆಯುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈಸ್‍ಮಿಲ್‌ ಮಾಲೀಕರ ಸಂಘದ ರಾಜ್ಯ ನಿರ್ದೇಶಕ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಅವರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ರಾತ್ರಿ ಭೇಟಿ ಮಾಡಿ, ಈ ಕುರಿತ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಕಡಿಮೆ ಬೆಲೆ ಇದೆ. ಈ ಕಾರಣಕ್ಕೆ ರೈತರು ಬೆಳೆದ ಭತ್ತದ ಬೆಳೆಗೆ ಹೆಚ್ಚಿನ ಬೆಲೆ ಲಭಿಸುತ್ತಿಲ್ಲ. ಹೊನ್ನಾಳಿ ಯಲ್ಲಿ ಶೀಘ್ರವೇ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ರೈತರಿಗೆ ಬೆಲೆ ಖಾತ್ರಿ ಒದಗಿಸಬೇಕು ಎಂದು ವಿನಂತಿಸಿದರು.

ಭತ್ತ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಕಾರ್ಮಿಕರು-ಯಂತ್ರಗಳ ವೆಚ್ಚ ಸೇರಿದಂತೆ ವಿವಿಧ ರೀತಿಯ ಖರ್ಚುಗಳು ಅತಿ ಹೆಚ್ಚಾಗಿವೆ. ಆದರೆ, ರೈತ ಬೆಳೆದ ಭತ್ತಕ್ಕೆ ಮಾತ್ರ ಸ್ಪರ್ಧಾತ್ಮಕ ಬೆಲೆ ಲಭಿಸುತ್ತಿಲ್ಲ. ಇದರಿಂ ದಾಗಿ ರೈತರು ತೀವ್ರ ನೋವು ಅನುಭವಿಸು ವಂತಾಗಿದೆ. ಸರ್ಕಾರದ ವತಿಯಿಂದ ಭತ್ತ ಖರೀದಿ ಕೇಂದ್ರ ತೆರೆದು, ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ತನ್ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದರು.

ತುಂಗಾ ಹಾಗೂ ಭದ್ರಾ ಜಲಾಶಯಗಳು, ತುಂಗಾ ಮೇಲ್ದಂಡೆ ಯೋಜನೆ, ತುಂಗಭದ್ರಾ ನದಿ ನೀರು ಹಾಗೂ ಕೊಳವೆ ಬಾವಿ ನೀರು ಬಳಸಿಕೊಂಡು ದಾವಣಗೆರೆ ಜಿಲ್ಲೆ ಮತ್ತು ಹೊನ್ನಾಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಭತ್ತದ ಇಳುವರಿ ಬರುವ ಮುನ್ನ ಭತ್ತಕ್ಕೆ ಇರುವ ಬೆಲೆ, ಭತ್ತದ ಕೊಯ್ಲು ಆದ ನಂತರ ಇರುವುದಿಲ್ಲ. 

ರೈತರು ಭತ್ತದ ಕೊಯ್ಲು ಪ್ರಾರಂಭಿಸುತ್ತಿದ್ದಂತೆ ಭತ್ತದ ದರ ಕುಸಿಯುತ್ತದೆ. ಆಗ ರೈತರು ಅನಿವಾರ್ಯವಾಗಿ ವರ್ತಕರು ಕೇಳಿದ ಬೆಲೆಗೆ ಭತ್ತವನ್ನು ಮಾರಾಟ ಮಾಡಬೇಕಾಗುತ್ತದೆ. ಇಂಥ ಅನಿವಾರ್ಯ ಸ್ಥಿತಿಯಿಂದ ರೈತರನ್ನು ಪಾರು ಮಾಡಬೇಕಾದರೆ ಸರ್ಕಾರ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಮನವಿ ಮಾಡಿದರು.

ರೈಸ್‍ಮಿಲ್‌ ಮಾಲೀಕರ ಸಂಘದ ಮನವಿ ಪತ್ರ ಸ್ವೀಕರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ, ಸಂಬಂಧಿಸಿದ ಅಧಿಕಾರಿಗಳನ್ನು ತಮ್ಮ ಕೊಠಡಿಗೆ ಕರೆಸಿ ಶೀಘ್ರವೇ ಭತ್ತ ಖರೀದಿ ಕೇಂದ್ರವನ್ನು ತೆರೆಯಲು ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು.

ರಾಜ್ಯ ರೈಸ್‍ಮಿಲ್‌ ಅಸೋಸಿಯೇಷನ್ ಅಧ್ಯಕ್ಷ, ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ, ರೈಸ್‍ಮಿಲ್ಸ್ ಮಾಲೀಕರಾದ ದಾವಣಗೆರೆ ರಾಜಣ್ಣ, ಮಲೇಕುಂಬಳೂರು ಕೆ.ಬಿ. ರಾಜಶೇಖರ್, ಜಾವೇದ್ ಸಾಬ್ ಇನ್ನಿತರರಿದ್ದರು.

error: Content is protected !!