ಆನ್‌ಲೈನ್‌ ಭಾವನೆಗಳೊಂದಿಗೆ ಆಡುವುದೇ `100′

ಪುನೀತ್ ಸಾವಿನ ಬಗ್ಗೆ ತಪ್ಪು ಕಲ್ಪನೆ

ಪುನೀತ್ ರಾಜ್‌ಕುಮಾರ್ ಅವರ ಸಾವಿನ ಕುರಿತ ತಪ್ಪು ಕಲ್ಪನೆಯಿಂದ ಕೆಲವರು ಜಿಮ್‌ನಿಂದ ದೂರವಾಗುತ್ತಿದ್ದಾರೆ. ಈ ಘಟನೆ ಒಂದು ಅಪವಾದವೇ ಹೊರತು ಸಾಮಾನ್ಯವಲ್ಲ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.

ಕನಸುಗಳನ್ನು ಈಡೇರಿಸಿಕೊಳ್ಳಲು ದೇಹವೇ ವಾಹನ. ಹೀಗಾಗಿ ಆರೋಗ್ಯಕ್ಕಾಗಿ ಅಗತ್ಯ ಕಸರತ್ತನ್ನು ಎಲ್ಲರೂ ಮಾಡಬೇಕು. ಜಿಮ್ – ಹೆವಿಲಿಫ್ಟ್ ಅಲ್ಲದೇ ಇದ್ದರೂ ಸಣ್ಣ ಪುಟ್ಟ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು ಎಂದವರು ಕಿವಿಮಾತು ಹೇಳಿದ್ದಾರೆ.

 

ತಲೆ ಖಾಲಿ ಇರುವುದೇ ವಯಸ್ಸಾಗದಿರುವ ಗುಟ್ಟು

ನಟ ರಮೇಶ್ ಅರವಿಂದ್ ಅವರಿಗೆ ವಯಸ್ಸಾಗುವುದೇ ಇಲ್ಲವೇ? ಎಂಬ ಪ್ರಶ್ನೆಗೆ ಮುಗುಳ್ನಗುತ್ತಾ ಉತ್ತರಿಸಿದ ರಮೇಶ್, ನನ್ನ ತಲೆ ಖಾಲಿ ಇದೆ! ಹೀಗಾಗಿಯೇ ವಯ ಸ್ಸಾಗುತ್ತಿಲ್ಲ ಎಂದು ಚಟಾಕಿ ಹಾರಿಸಿದರು. ಓದುವುದು, ಚಲನಚಿತ್ರ, ಕುಟುಂಬ ಹೊರತಾಗಿ ಬೇರೆ ಯಾವ ವಿಷ ಯವೂ ನಾನು ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ತಲೆ ಖಾಲಿ ಇರುವುದರಿಂದ ವಯಸ್ಸು ಕಾಣುತ್ತಿಲ್ಲ ಎಂದು ಹೇಳಿದರು.

 

ದಾವಣಗೆರೆ, ನ.10 – ಮೊಬೈಲ್‌ಗಳಿಂದಾಗಿ ಕುಟುಂಬದ ಸದಸ್ಯರು ಮುಖ ಕೊಟ್ಟು ಮಾತನಾಡದ ಪರಿಸ್ಥಿತಿ ಮನೆ ಮನೆಗಳಲ್ಲಿದೆ. ಆನ್‌ಲೈನ್
ಭಾವನೆಗಳ ಜೊತೆ ಯಾವ ರೀತಿ ಆಟ ಆಡುತ್ತದೆ ಎಂಬುದನ್ನು §100¬ ಚಿತ್ರದ ಮೂಲಕ ತೋರಿಸಲಾಗಿದೆ ಎಂದು ಚಿತ್ರನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ತಿಳಿಸಿದ್ದಾರೆ.

ಚಿತ್ರದ ಪ್ರಚಾರಕ್ಕಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜನರ ಕೈಲಿ ಮೊಬೈಲ್ ಬಂದ ಮೇಲೆ ಪ್ರಪಂಚ ನೋಡುವುದೇ ಕಡಿಮೆಯಾಗಿದೆ. ಮೊಬೈಲ್ ಹಾಗೂ ಆನ್‌ಲೈನ್ ಜಗತ್ತು ತಪ್ಪಾದ ಪ್ರಭಾವ ಬೀರಿದಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದವರು ಹೇಳಿದ್ದಾರೆ.

ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ ಸುಧೀರ್ ಮುಂತಾದವರು ನಟಿಸಿರುವ ಈ ಚಿತ್ರ ಬರುವ ನ.19ರಂದು ಚಿತ್ರಮಂದಿರಗಳಿಗೆ ಬರಲಿದೆ. ಈ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗುತ್ತಿದೆ ಎಂದಿದ್ದಾರೆ.

ಶಿವಾಜಿ ಸುರತ್ಕಲ್ ತಮಗೆ ಯಶಸ್ಸು ತಂದ ಚಿತ್ರವಾಗಿದ್ದು, ಅದರ ಮುಂದುವರೆದ ಭಾಗದಂತೆ §100¬ ಮೂಡಿ ಬಂದಿದೆ. ಈ ಚಿತ್ರದ ನಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಕಾರಣ, ತುರ್ತು ಕರೆ ಸಂಖ್ಯೆಯಾದ 100 ಹೆಸರನ್ನು ಚಿತ್ರಕ್ಕೆ ಇಡಲಾಗಿದೆ ಎಂದವರು ವಿವರಿಸಿದರು.

ಸೈಬರ್ ಅಪರಾಧ, ಆನ್‌ಲೈನ್ ವಂಚನೆ, ಟ್ರೋಲ್, ಫೇಕ್ ನ್ಯೂಸ್ ಮುಂತಾದವರು ಆನ್‌ಲೈನ್ ಜಗತ್ತಿನ ಹಾವಳಿಗಳಾಗಿವೆ. ಆನ್‌ಲೈನ್ ಟ್ರೋಲ್‌ ಹಾಗೂ ಫೇಕ್‌ ನ್ಯೂಸ್‌ಗೆ ಸಿಲುಕಿದವರು ನಿಂದನೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದಿವೆ. ಆನ್‌ಲೈನ್ ಕುಟುಂಬವೊಂದರ ಮೇಲೆ ಯಾವ ರೀತಿಯ ಆಘಾತ ನೀಡಬಹುದು ಎಂಬುದನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ರಮೇಶ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ಮಾಪಕ ಎಂ. ರಮೇಶ್ ರೆಡ್ಡಿ, ಎಲ್ಲರ ಮನೆಯಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥೆಯಾಗಿ ಮೂಡಿ ಬಂದಿದೆ. ಇದು ಇಷ್ಟಪಟ್ಟು ಮಾಡಿರುವ ಚಿತ್ರವಾಗಿದೆ ಎಂದರು.

error: Content is protected !!