ಡಾಂಬರೀಕರಣಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಹರಪನಹಳ್ಳಿ, ನ.10- ಪಟ್ಟಣದ ಆಚಾರ್‌ ಬಡಾವಣೆಯಲ್ಲಿ  ರಸ್ತೆಗಳ  ಡಾಂಬರೀಕರಣಕ್ಕಾಗಿ ಆಗ್ರಹಿಸಿ, ಅಲ್ಲಿಯ ನಿವಾಸಿಗಳು ಗಣೇಶ ದೇವಸ್ಥಾನದ ಎದುರಿಗಿನ ರಸ್ತೆ ತಡೆದು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಹಾಗೂ ಪುರಸಭಾ ಸದಸ್ಯ ಎಚ್‌.ಎಂ. ಅಶೋಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ  ಡಿ. ರಾಮನಮಲಿ ಮಾತನಾಡಿ,  ಆಚಾರ್‌ ಬಡಾವಣೆಯ ಮುಖ್ಯ ರಸ್ತೆಗಳು, ಅಡ್ಡ ರಸ್ತೆಗಳು ತುಂಬಾ ಹಾಳಾಗಿವೆ. ಮಳೆಗಾಲದಲ್ಲಿ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚಾರ ಕಷ್ಟದಾಯಕವಾಗಿದ್ದು, ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರಾದ ವೀರಭದ್ರಯ್ಯ (ಬದ್ರಿ), ಉಸ್ಮಾನ್, ಕೆ.ಎಚ್.ಎಂ.ರುದ್ರಮುನಿಸ್ವಾಮಿ ಮಾತನಾಡಿ, ಪ್ರತಿಷ್ಠಿತ ಬಡಾವಣೆ ಎಂದು ಕರೆಯುವ ಈ ಬಡಾವಣೆಯತ್ತ ಪುರಸಭೆಯವರು ಗಮನ ಹರಿಸದೇ ಇರುವುದು ಶೋಚನೀಯ ಸಂಗತಿಯಾಗಿದೆ. ಇದು ಹಂದಿಗಳ ವಾಸ ಸ್ಥಾನವಾಗಿದ್ದು,  ರೋಗಗಳು ಹರಡುವ ಸಾಧ್ಯತೆ ಇದೆ. ತುರ್ತಾಗಿ ಆಚಾರ್ ಬಡಾವಣೆಯ ರಸ್ತೆಗ ಳನ್ನು ಡಾಂಬರೀಕರಣಗೊಳಿಸಬೇಕು. ಹಂದಿ ಹಿಡಿದು ಊರ ಹೊರ ಸಾಗಿಸಬೇಕು  ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಜಿ. ಪವಾರ್, ಪ್ರಶಾಂತ್‌,
ಪಿ.ಟಿ. ಮಂಜುನಾಥ್‌, ಪುಂಡಿ ಪಂಪಣ್ಣ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!