ಸಚಿವೆ – ಶಾಸಕರಿಂದಲೇ ಮಕ್ಕಳ ಮೊಟ್ಟೆಗೆ ಕನ್ನ

ದಾವಣಗೆರೆ, ಜು.27- ಮೊಟ್ಟೆ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಖಂಡಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಸೇರಿದ್ದ ಮಹಿಳಾ ಕಾಂಗ್ರೆಸ್ ಕಾರ್ಯ ಕರ್ತೆಯರು, ಮೊಟ್ಟೆಗಳನ್ನು ಪ್ರದರ್ಶಿಸುತ್ತಾ, ಮೊಟ್ಟೆ ಖರೀದಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಅಂಗನವಾಡಿ ಮೂಲಕ ಕೊಡಲ್ಪಡುವ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪಕ್ಕೊಳಕ್ಕಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಕಾಶೆಪ್ಪನವರ್ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಅಪೌಷ್ಠಿಕತೆಯಿಂದ ಬಳಲದಿರಲೆಂದು ಸರ್ಕಾರ ಮಾತೃ ಪೂರ್ಣ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಲ್ಲಿ ಅಂಗವಾಡಿ ಮೂಲಕ ಮಹಿಳೆ ಮತ್ತು ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ. ಮೊಟ್ಟೆ ಖರೀದಿಯಲ್ಲಿ ಜೊಲ್ಲೆ ಮತ್ತು ಶಾಸಕ ಪರಪ್ಪ ಮುನವಳ್ಳಿ ಅವರು ಭ್ರಷ್ಟಾಚಾರ ನಡೆಸುವುದರ ಮೂಲಕ ಮಕ್ಕಳಿಗೆ ನೀಡಲಾಗುವ ಮೊಟ್ಟೆಗೆ ಕನ್ನ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್‌ರಾವ್ ಜಾಧವ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿತು. ಈಗಿನ ಬಿಜೆಪಿ ಸರ್ಕಾರ ಆ ಯೋಜನೆಗಳನ್ನು ಕಸಿದುಕೊಳ್ಳುತ್ತಿದೆ ಎಂದರು. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ, ಕೆಪಿಸಿಸಿ ಜಿಲ್ಲಾ ವಕ್ತಾರರೂ ಆದ ಶ್ರೀಮತಿ ನಾಗರತ್ನಮ್ಮ ಮಲ್ಲೇಶಪ್ಪ ಮಾತನಾಡಿ, ಸರ್ಕಾರ ನಡೆಸಿದ ಮಾಹಿತಿ ಪ್ರಕಾರ ಮಕ್ಕಳು ಅಪೌಷ್ಠಿಕತೆಯಿಂದ ಬಳಲಿ ರೋಗ – ನಿರೋಧಕ ಶಕ್ತಿ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಈ ಹಗರಣವು ಮಹಿಳೆಯರನ್ನು ತಲೆತಗ್ಗಿಸುವಂತಹದ್ದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಆಶಾ ಮುರುಳಿ, ದ್ರಾಕ್ಷಾಯಣಮ್ಮ, ಬ್ಲಾಕ್ ಅಧ್ಯಕ್ಷರಾದ ರಾಜೇಶ್ವರಿ ಶುಭಮಂಗಳ, ರಾಧಾಬಾಯಿ, ಗೀತಾ ಪ್ರಶಾಂತ್, ಗೀತಾ ಚಂದ್ರಶೇಖರ್, ಮಂಜಮ್ಮ, ರುದ್ರಮ್ಮ, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್, ಎಸ್.ಮಲ್ಲಿಕಾ ರ್ಜುನ್, ಕೊಡಪಾನ ದಾದಾಪೀರ್, ರಾಕೇಶ್, ಮೊಟ್ಟೆ ದಾದಾಪೀರ್, ಜಿಕ್ರಿಯಾ, ಶ್ರೀಕಾಂತ್ ಬಗರೆ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

error: Content is protected !!