ದಾವಣಗೆರೆ, ನ.9- `ನಿಮ್ಮ ಕಚೇರಿ ಅಷ್ಟೇ ಅಲ್ಲ, ಮಕ್ಕಳು ವಾಸವಿರುವ ಕೊಠಡಿಗಳೂ ಸಹ ಸ್ಮಾರ್ಟ್ ಆಗಿರಲಿ’
ಹೀಗೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ರಾಜೇಶ್ವರಿ ಎನ್. ಹೆಗಡೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ಅವರಿಗೆ ಸಲಹೆ ಕೊಟ್ಟರು.
ರಾಜೇಶ್ವರಿ ಹೆಗಡೆ ಅವರು, ಇಂದು ನಗರದ ಕುವೆಂಪು ನಗರದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮೂಲಕ ಮಹಿಳಾ ಸಬಲೀಕರಣ ಶಿಬಿರದ ಉದ್ಘಾಟನೆಗೂ ಮುನ್ನ ಈ ಕಚೇರಿ ಆವರಣದಲ್ಲಿನ ಬಾಲಕರ ಸರ್ಕಾರಿ ಬಾಲಮಂದಿರದ ಹಳೇ ಕಟ್ಟಡದ ಪ್ರತಿಯೊಂದು ಕೊಠಡಿಗಳು, ಒಳ ಹಾಗೂ ಹೊರ ಆವರಣದಲ್ಲಿನ ಕಟ್ಟಡವನ್ನು ವೀಕ್ಷಿಸುತ್ತಾ ವಾಸ್ತವತೆಯನ್ನು ಅವಲೋಕಿಸಿದರು.
ಮಕ್ಕಳು ವಾಸವಿರುವ ಕೊಠಡಿಗಳ ಪೈಕಿ ಬಹುತೇಕ ಕೊಠಡಿಗಳ ಗೋಡೆಗಳ ಬಿರುಕು ಮತ್ತು ಚಕ್ಕಳ ಎದ್ದಿರುವುದು, ಬಣ್ಣ ಮಾಸಿ ಹೋಗಿರುವುದು, ಕಿಟಕಿ ಹಾಳಾಗಿರುವುದು, ಗೋಡೆಗಳಷ್ಟೆ ಅಲ್ಲದೇ ಕೊಠಡಿಗಳ ಮೇಲ್ಛಾವಣಿಯಲ್ಲಿ ಚಕ್ಕಳ ಎದ್ದು ಬಣ್ಣ ಮಾಸಿದ್ದು ಹೀಗೆ ಬಾಲಕರ ಬಾಲಮಂದಿರ ಬಹುತೇಕ ಶಿಥಿಲಾವಸ್ಥೆಗೆ ತಲುಪಿರುವುದನ್ನು ಕಣ್ಣಾರೆ ಕಂಡರು. ಅಲ್ಲದೇ ಈ ವಾತಾವರಣದಲ್ಲಿ ಮಕ್ಕಳಿರುವುದಕ್ಕೆ ನೋವು ಪಟ್ಟುಕೊಂಡರು. ಹಳೇ ಕಟ್ಟಡದ ಶಿಥಿಲಾವಸ್ಥೆ, ಅಭಿವೃದ್ಧಿ ಬಗ್ಗೆ ವಿಜಯ್ ಕುಮಾರ್ ಬಳಿ ಮಾಹಿತಿ ಪಡೆದರು.
ಡಿ.9, 1977ರಂದು ಈ ಕಟ್ಟಡ ಉದ್ಘಾಟನೆಯಾಗಿದ್ದು, ಸುಮಾರು 44 ವರ್ಷಗಳ ಹಳೇ ಕಟ್ಟವಿದಾಗಿದೆ. ಇಲ್ಲಿ ಸುಮಾರು ಹಾಲಿ 45 ಮಕ್ಕಳು ವಾಸವಿದ್ದು, ಸದ್ಯಕ್ಕೆ 38 ಮಕ್ಕಳಿದ್ದು, ಉಳಿದವರು ರಜೆಗೆ ಊರಿಗೆ ಹೋಗಿದ್ದಾರೆ. ಕಟ್ಟಡದ ರಿಪೇರಿಗಾಗಿ ಸುಮಾರು 30 ಲಕ್ಷ ರೂ. ಮಂಜೂರಾತಿಗಾಗಿ ನಮ್ಮ ಇಲಾಖೆಗೆ ಮನವಿ ಮಾಡಿದ್ದೆ. ಇನ್ನೂ ಸ್ವಲ್ಪ ಹಣ ಖರ್ಚು ಮಾಡಿದರೆ ನೂತನ ಕಟ್ಟಡವನ್ನೇ ನಿರ್ಮಿಸಬಹುದೆಂಬ ಅಭಿಪ್ರಾಯ ಕೇಳಿ ಬಂದ ಕಾರಣ, ಈಗಾಗಲೇ ಕಟ್ಟಡದ ಸಾಮರ್ಥ್ಯ ಪರೀಕ್ಷೆ ನಡೆಸಿ, ವರದಿ ನೀಡುವಂತೆ ಇಲ್ಲಿನ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಕಟ್ಟಡಕ್ಕೆ ಇನ್ನೂ ಸಾಮರ್ಥ್ಯವಿದ್ದರೆ ರಿಪೇರಿ ಮಾಡಿಸಲಾಗುವುದು, ಹಾಗೇನಾದರೂ ಸಾಮರ್ಥ್ಯವಿಲ್ಲವೆಂದಾದರೆ ನೂತನ ಕಟ್ಟಡಕ್ಕೆ ಚಿಂತನೆ ನಡೆಸುವುದಾಗಿ ತಿಳಿಸಿದರು.
ಮಕ್ಕಳು ವಾಸವಿರುವ ಕೊಠಡಿಗಳ ಪೈಕಿ ಬಹುತೇಕ ಕೊಠಡಿಗಳ ಗೋಡೆಗಳ ಬಿರುಕು ಮತ್ತು ಚಕ್ಕಳ ಎದ್ದಿರುವುದು, ಬಣ್ಣ ಮಾಸಿ ಹೋಗಿರುವುದು, ಕಿಟಕಿ ಹಾಳಾಗಿರುವುದು, ಗೋಡೆಗಳಷ್ಟೆ ಅಲ್ಲದೇ ಕೊಠಡಿಗಳ ಮೇಲ್ಛಾವಣಿಯಲ್ಲಿ ಚಕ್ಕಳ ಎದ್ದು ಬಣ್ಣ ಮಾಸಿದ್ದು ಹೀಗೆ ಬಾಲಕರ ಬಾಲಮಂದಿರ ಬಹುತೇಕ ಶಿಥಿಲಾವಸ್ಥೆಗೆ ತಲುಪಿರುವುದನ್ನು ಕಣ್ಣಾರೆ ಕಂಡರು.
ಆಗ ರಾಜೇಶ್ವರಿ ಅವರು ಕೂಡಲೇ ಶಿಥಿಲಾವಸ್ಥೆಯಲ್ಲಿನ ಕಟ್ಟಡದ ಅಭಿವೃದ್ಧಿಗೆ ಕ್ರಮ ವಹಿಸುವಂತೆಯೂ ಸಲಹೆ ನೀಡುತ್ತಾ ಮುತುವರ್ಜಿ ತೋರಿಸಿದರು.
ನಂತರ ಬಾಲಮಂದಿರದ ಅಡುಗೆ ಕೋಣೆಗೆ ತೆರಳಿ ಅಲ್ಲಿನ ವ್ಯವಸ್ಥೆ ಪರೀಕ್ಷಿಸಿದರಲ್ಲದೇ, ಮಕ್ಕಳಿಗೆ ಉಟೋಪಚಾರದ ಬಗ್ಗೆ ಮಹಿಳಾ ಅಡುಗೆ ಕೆಲಸಗಾರರ ಬಳಿ ವಿಚಾರಿಸಿದರು. ಕಾಫಿ, ಚಹಾ ಕುಡಿಯದ ಮಕ್ಕಳಿಗೆ ಹಾಲನ್ನಾದರೂ ನೀಡುವಂತೆ ಹೇಳಿದರು. ಕಂಪ್ಯೂಟರ್ ವಿಭಾಗ, ಗ್ರಂಥಾಲಯ ಹೀಗೆ ಬಾಲಮಂದಿರದ ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದರು.
ನಂತರ ಕಾರ್ಯಕ್ರಮ ಸ್ಥಳವಾದ 2 ವರ್ಷಗಳ ಹಿಂದೆ ನೂತನವಾಗಿ ನಿರ್ಮಿಸಿ ಉದ್ಘಾಟಿಸಲಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ತೆರಳಿ ಅಲ್ಲಿನ ಆಡಳಿತ ಕಚೇರಿ ಕೊಠಡಿಗಳು, ಉಪನಿರ್ದೇಶಕರ ಕೊಠಡಿ ಸುಸಜ್ಜಿತವಾಗಿರುವುದನ್ನು ಕಂಡು ಸಂತಸ ಪಟ್ಟರಲ್ಲದೇ, ನಿಮ್ಮ ಕಚೇರಿ ಹೇಗೆ ಸುಸಜ್ಜಿತ, ಸ್ಮಾರ್ಟ್ ಆಗಿದೆಯೋ ಹಾಗೆಯೇ ಬಾಲಮಂದಿರದಲ್ಲಿ ಮಕ್ಕಳು ವಾಸಿಸುವ ಕೊಠಡಿಗಳನ್ನೂ ಸಹ ಸುಸಜ್ಜಿತ, ಸ್ಮಾರ್ಟ್ ಮಾಡಿ ಎಂದು ಸಲಹೆ ನೀಡಿದರು.