ಎಸ್ಸಿ-ಎಸ್ಟಿಗೆ ಹಣ ನೀಡಿ ಮತ ಹಾಕಿಸಿಕೊಳ್ಳುವ ಕಾಲ ಈಗಿಲ್ಲ, ಈಗಿನದು ಪಾಠ ಕಲಿಸುವ ಕಾಲ

ಮಲೇಬೆನ್ನೂರು, ನ.9- ಮುಂದಿನ ವರ್ಷ ಫೆಬ್ರವರಿ 8 ಮತ್ತು 9 ರಂದು ನಡೆಯಲಿರುವ 4ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಹೊಸ ವಿಷಯಗಳೊಂದಿಗೆ ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ನಿಮ್ಮ ಸಲಹೆ-ಸಹಕಾರ ಪಡೆಯಲು ಈ ಸಭೆ ಕರೆಯಲಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 4ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಇಂದು ಕರೆದಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಸಚಿವ ಆನಂದ್ ಸಿಂಗ್ ಅವರು ನಿರ್ಮಿಸುತ್ತಿರುವ ನೂತನ ರಥ ಜಾತ್ರೆಯಲ್ಲಿ ಲೋಕಾರ್ಪಣೆ ಆಗಲಿದೆ. ಜಾತ್ರೆಯಲ್ಲಿ ರೈತರಿಗೆ, ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಸಮಾಜ ಸಂಘಟನೆಗಾಗಿ ರಾಜ್ಯದಲ್ಲಿ ಇದುವರೆಗೆ ಸುಮಾರು 21 ಲಕ್ಷ ಕಿ.ಮೀ. ಪ್ರಯಾಣ ಮಾಡಿದ್ದೇವೆ. ನಮ್ಮ ಸಮಾಜ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದೇ ಜಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಕಳೆದ 3 ಜಾತ್ರೆಗಳಲ್ಲಿ ಸಮಾಜದ ಬಂಧು ಗಳು ನಿರೀಕ್ಷೆಗೂ ಮೀರಿ ಆರ್ಥಿಕ ನೆರವು ಹಾಗೂ ಬೆಂಬಲ ನೀಡಿದ್ದಾರೆ. ಕಳೆದ ವರ್ಷ ಕೊರೊನಾ ಇದ್ದರೂ ದಾಖಲೆ ಸಂಖ್ಯೆಯಲ್ಲಿ ಜನರು ಜಾತ್ರೆಗೆ ಹರಿದು ಬಂದಿದ್ದರು. 3 ಜಾತ್ರೆಯಲ್ಲಿ ಜನರು ನೀಡಿದ ದೇಣಿಗೆ ಹಣದಲ್ಲಿ ಖರ್ಚು ತೆಗೆದು ಸುಮಾರು 4 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಬಾಂಡ್ ಸಹಿತ ಸಭೆಗೆ ಮಾಹಿತಿ ನೀಡಿದರು.

ಸಮಾಜದ ನೋವುಗಳು, ಸವಾಲುಗಳು ಸಾಕಷ್ಟಿವೆ. ಮೀಸಲಾತಿ ಹೆಚ್ಚಳ ಪ್ರಮುಖ ಬೇಡಿಕೆಯಾಗಿದೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೀಸಲಾತಿ ಹೆಚ್ಚಳ ಇಷ್ಟು ವರ್ಷ ವಿಳಂಬವಾಗಿದೆ. ಹಾಗಾಗಿ ನಿಮ್ಮನ್ನು ಎಚ್ಚರಿಸಿ ನಮ್ಮೊಂದಿಗೆ ಹೋರಾಟಕ್ಕೆ ಇಳಿಸಿದ್ದೇವೆ. ಎಸ್ಸಿ-ಎಸ್ಟಿ ಸಮುದಾಯಗಳ ಬೇಡಿಕೆಗಳ ಬಗ್ಗೆ ಸರ್ಕಾರ ಬೇಜವಾಬ್ದಾರಿತನ ತೋರುತ್ತಿದ್ದು, ಇದು ಹೀಗೆ ಮುಂದುವರೆದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗು ತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. 

ಜನರನ್ನು ಚುನಾವಣೆ ಬಂದಾಗ ಎಸ್ಸಿ-ಎಸ್ಟಿ ಜನಾಂಗಕ್ಕೆ ಹಣ ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ಮುಗಿದಿದೆ. ನಮ್ಮ ಜನರೂ ಜಾಗೃತರಾಗಿದ್ದಾರೆ. ನೀವು ಎಷ್ಟೇ ಹಣ ನೀಡಿದರೂ ಮತವನ್ನು ಯಾರಿಗೆ ಹಾಕಬೇಕೆಂದು ನಿರ್ಧರಿಸಿರುತ್ತಾರೋ ಅವರಿಗೆ ಹಾಕುತ್ತಾರೆ ಎಂದು ಹಾನಗಲ್ ಚುನಾವಣೆ ಫಲಿತಾಂಶವನ್ನು ಸ್ವಾಮೀಜಿ ಉದಾಹರಣೆ ನೀಡಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ,  ಎಸ್ಟಿ ಮೀಸಲಾತಿ ಹೆಚ್ಚಳ ಸಂವಿಧಾನಿಕ ಹಕ್ಕಾಗಿದ್ದು, ಆ ಕೆಲಸ ಆಗುವವರೆಗೂ ಶ್ರೀಗಳ ನೇತೃತ್ವದಲ್ಲಿ ಹೋರಾಟ ಅನಿವಾರ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಲ್ಮೀಕಿ ವಿಜಯ ಸಂಪುಟ-3 ರ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ,  ಶೋಷಿತರು ಕೇವಲ ಭರವಸೆಯಲ್ಲಿ ಬೆಂದು ಹೋಗಿದ್ದೇವೆ. ಸಮುದಾಯಗಳ ಸಂಕಟಗಳ ನಿವಾರಣೆಗಾಗಿ ಪಕ್ಷ ರಾಜಕಾರಣ ಬಿಟ್ಟು ಎಲ್ಲರೂ ಒಂದೆಡೆ ಸೇರಿ ಚರ್ಚಿಸಿದರೆ ಯಾವುದೇ ಸರ್ಕಾರ ಇದ್ದರೂ ನಮ್ಮ ಕಡೆ ತಿರುಗಿ ನೋಡುತ್ತದೆ ಎಂದರು.

ವಾಲ್ಮೀಕಿ ವಿಜಯ ಸಂಪುಟ-4 ರ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರದುರ್ಗದ ಪ್ರೊ. ಕರಿಯಪ್ಪ ಮಾಳಗಿ ಮಾತನಾಡಿ, ಜಾತ್ರೆಯಲ್ಲಿ ಶಕ್ತಿ ಇಲ್ಲದ ಜನರ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಚರ್ಚೆ ಆಗಲಿ ಎಂದು ಒತ್ತಾಯಿಸಿದರು.

ಮೈಸೂರಿನ ದೇವಪ್ಪನಾಯಕ, ಧಾರವಾಡದ ಭರತ್ ಮಗದೂರು, ವಕೀಲ  ಗುಮ್ಮನೂರು ಮಲ್ಲಿಕಾರ್ಜುನ್‌, ಚಳ್ಳಕೆರೆಯ ರಾಘವೇಂದ್ರ, ಮಠದ ಧರ್ಮದರ್ಶಿಗಳಾದ ಮುಖಂಡ ಹೊದಿಗೆರೆ ರಮೇಶ್, ತುಂಗೇನಹಳ್ಳಿ ಲೋಹಿತ್, ಬಿ. ವೀರಣ್ಣ, ಹರ್ತಿಕೋಟೆ ವೀರೇಂದ್ರ ಸಿಂಹ, ಹೊಸಪೇಟೆಯ ಜಂಬಣ್ಣ ಮಾತನಾಡಿದರು. 

ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಸಮಾಜದ ಹಾಸನ ಜಿಲ್ಲಾಧ್ಯಕ್ಷ ರವಿಕುಮಾರ್, ಚಿಕ್ಕಮಗಳೂರು ಅಧ್ಯಕ್ಷ ಭೀಮಣ್ಣ, ಬೀದರ್ ಜಿಲ್ಲಾಧ್ಯಕ್ಷ  ದಶರಥ್ ಜಮಾದಾರ್, ಬಳ್ಳಾರಿ ಜಿಲ್ಲಾಧ್ಯಕ್ಷ ದೊಡ್ಡ ಎರಿಸ್ವಾಮಿ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ಹದಡಿ ಹಾಲಪ್ಪ, ಮಠದ ಧರ್ಮದರ್ಶಿಗಳಾದ ಕೊಪ್ಪಳದ ರತ್ನಾಕರ, ಹಾಸನದ ಮಹೇಶ್, ನಲುವಾಗಲು ನಾಗರಾಜಪ್ಪ, ವಿಜಯಪುರ ಜಿಲ್ಲೆಯ ಕೌಲಗಿ, ಉಚ್ಚೆಂಗೆಪ್ಪ, ಹರಿಹರ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷ ಕೆ.ಆರ್. ರಂಗಪ್ಪ, ಕೆ.ಎನ್. ಹಳ್ಳಿಯ  ವಿ. ಕುಬೇರಪ್ಪ, ತಿಮ್ಮೇನಹಳ್ಳಿ ಚಂದ್ರಪ್ಪ, ಜಿಗಳಿಯ ಜಿ. ಆನಂದಪ್ಪ, ಗಣೇಶ್ ಹುಲ್ಲುಮನಿ, ಮಲ್ಲಾಪುರ ದೇವರಾಜ್, ಕೆಪಿಟಿಸಿಎಲ್‌ ಎಇಇ ಜಯ್ಯಪ್ಪ, ಶ್ಯಾಗಲೆ ಸತೀಶ್, ಅಣಜಿ ಅಂಜಿನಪ್ಪ, ತಣಿಗೆರೆ ಸನ್ನಿ, ರಾಘು ದೊಡ್ಮನಿ, ಕೊಕ್ಕನೂರಿನ ಕೆ.ಹೆಚ್. ಕೊಟ್ರಪ್ಪ, ಡಿ. ಸೋಮಶೇಖರ್, ಪಾರ್ವತಿ ಪಾಳೇಗಾರ್ ನಾಗರಾಜ್, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಚೈತ್ರ ಲಂಕೇಶ್‌ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.  `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಸ್ವಾಗತಿಸಿದರು.

error: Content is protected !!