ಭತ್ತ ಕಟಾವಿಗೆ ಬರುವ ತನಕ ಜೊತೆ ಇರುವೆ

ಕೊನೆ ಭಾಗದ ರೈತರಿಗೆ ಭರವಸೆ ನೀಡಿದ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ

ಕೊನೆ ಭಾಗದ ರೈತರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿರುವ ಪವಿತ್ರ ರಾಮಯ್ಯ ಅವರಿಗೆ ‘ಮಡಲಕ್ಕಿ’ ಹಾಕುವ ಮೂಲಕ ರೈತರು ಅಭಿನಂದಿಸಿದರು. 

ಮಲೇಬೆನ್ನೂರು, ಮಾ.10- ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಗಳಿಗೆ ಭೇಟಿ ನೀಡಿ, ನೀರು ನಿರ್ವಹಣೆ ಕುರಿತು ರೈತರ ಸಮಸ್ಯೆಗಳನ್ನು ಆಲಿಸಿದರು.

ಮೊದಲಿಗೆ ಭದ್ರಾ ನಾಲಾ ನಂ-3 ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಕೆ.ಎನ್. ಹಳ್ಳಿ, ಪಾಳ್ಯ, ಹೊಳೆ ಸಿರಿಗೆರೆ ಗ್ರಾಮಗಳ ರೈತರಿಗೆ ನೀರು ಪೂರೈಸುವ 14ನೇ ಕಾಲುವೆಯ ಕೊನೆ ಭಾಗಕ್ಕೆ ತೆರಳಿದ ಅವರನ್ನು ರೈತರು ಅಭಿನಂದಿಸಿದರು.

ಫೆಬ್ರವರಿ ತಿಂಗಳಲ್ಲೇ ನಾವು ನಾಟಿ ಮಾಡಲು ನೀರನ್ನು ಸಮರ್ಪಕವಾಗಿ ಪೂರೈಸಿದ ಮತ್ತು ಕೊನೆ ಭಾಗಕ್ಕೆ ಭೇಟಿ ನೀಡಿ ರೈತರ ಕಷ್ಟ-ಸುಖ ಆಲಿಸಿದ ಮೊದಲ ಕಾಡಾ ಅಧ್ಯಕ್ಷರು ನೀವು ಎಂದು ರೈತರು ಪವಿತ್ರಾ ಅವರನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಪಾಳ್ಯ ನಂದಿಗೌಡ, ಕುಬೇರಗೌಡ ಅವರು ಕಾಲುವೆಗಳಲ್ಲಿ ನೀರು ನಿರಂತರವಾಗಿ ನಿಗದಿತ ಮಟ್ಟದಲ್ಲಿ ಹರಿಯುತ್ತಿಲ್ಲ. ಹಾಗಾಗಿ ಅವಧಿಯ ಕೊನೆಯಲ್ಲಿ ನೀರಿನ ತೊಂದರೆ ಆಗುತ್ತಿದೆ ಎಂದಾಗ ಇದಕ್ಕೆ ದನಿಗೂಡಿಸಿದ ಹೊಳೆ ಸಿರಿಗೆರೆಯ ತಿಪ್ಪೇರುದ್ರಪ್ಪ ಅವರು ಬಸವಾಪಟ್ಟಣ ಸಮೀಪದ R2 ನಲ್ಲಿ 3.11 ಇರಬೇಕಾದ ನೀರಿನ ಗೇಜ್ 3.8 ಕ್ಕೆ ಇಳಿಕೆ ಮಾಡಿದ್ದಾರೆ. ಇದರಿಂದ ಕೊನೆ ಭಾಗಕ್ಕೆ ನೀರಿನ ಹರಿವು ಕಡಿಮೆ ಆಗಿದೆ ಎಂದರು. ತಕ್ಷಣ ಭದ್ರಾ ಅಧೀಕ್ಷಕ ಅಭಿಯಂತರ ಯತೀಶ್‌ಚಂದ್ರ ಅವರಿಗೆ ಫೋನ್ ಮಾಡಿದ ಪವಿತ್ರ ರಾಮಯ್ಯ ಅವರು ಮಲೇಬೆನ್ನೂರು ಭಾಗಕ್ಕೆ ಬರಬೇಕಾದ ನೀರನ್ನು ಸರಿಯಾಗಿ ಕಳುಹಿಸಲು ಗಮನ ಹರಿಸಿ ಎಂದು ತಾಕೀತು ಮಾಡಿದರು. ಪಾಳ್ಯ ಸಮೀಪ ಇರುವ ಕೆರೆಯನ್ನು ಭದ್ರಾ ಕಾಲುವೆ ನೀರಿನಿಂದ ತುಂಬಿಸಿದರೆ ಬೇಸಿಗೆ ಸಮಯದಲ್ಲಿ ಜನರಿಗೆ ಮತ್ತು ದನ-ಕರುಗಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಅಧ್ಯಕ್ಷರ ಗಮನ ಸೆಳೆದಾಗ, ಬರೀ ನಿಮ್ಮೂರಿನ ಕೆರೆ ಅಷ್ಟೇ ಅಲ್ಲ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಹರಿಸುವ ಚಿಂತನೆ ಹೊಂದಿದ್ದೇನೆ. ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಿ, ಭರ್ತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಡಲಕ್ಕಿ ಹಾಕಿದ ಮಹಿಳೆಯರು: ಕಾಲುವೆಗಳ ಮೇಲೆ ಸಂಚರಿಸುತ್ತಾ ಹೊಳೆಸಿರಿಗೆರೆ ಗ್ರಾಮಕ್ಕೆ ಆಗಮಿಸಿದ ಪವಿತ್ರ ರಾಮಯ್ಯ ಅವರನ್ನು ತಿಪ್ಪೇರುದ್ರಪ್ಪ ಅವರ ಮನೆಯಲ್ಲಿ ಮಹಿಳೆಯರು ಮಡಲಕ್ಕಿ ಹಾಕಿ ಕೃತಜ್ಞತೆ ಸಲ್ಲಿಸಿದರು. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನಮ್ಮ ಭಾಗದ ತೋಟಗಳು ನೀರಿಲ್ಲದೆ ಒಣಗುತ್ತಿದ್ದವು. ಈ ಬಾರಿ ತೋಟಗಳು ಸಮೃದ್ಧಿಯಾಗಿದ್ದು, ನಾಟಿಯನ್ನೂ ಮಾಡಿದ್ದೇವೆ. ಇದಕ್ಕೆಲ್ಲಾ ನಿಮ್ಮ ಇಚ್ಛಾಶಕ್ತಿಯೇ ಕಾರಣ ಎಂದು ಪವಿತ್ರ ರಾಮಯ್ಯ ಅವರನ್ನು ಹೊಗಳಿದರು.

ನೀರು ಬರುತ್ತಿಲ್ಲ: ಕಮಲಾಪುರದ ಕೊನೆ ಭಾಗದ ಕಾಲುವೆಗಳಿಗೆ ಭೇಟಿ ನೀಡಿದಾಗ ಕಮಲಾಪುರ, ಭಾನುವಳ್ಳಿ ರೈತರು 12 ಎಫ್ ಮತ್ತು 16,17 ನೇ ಕಾಲುವೆಯಲ್ಲಿ ನೀರು ಸಮರ್ಪಕವಾಗಿ ಬರುತ್ತಿಲ್ಲ. ನಮ್ಮ ಕಾಲುವೆಗಳಲ್ಲಿ ನೀರು ಹರಿಯುವ ಅವಧಿ ಮುಗಿಯುತ್ತಾ ಬಂದಿದೆ. ನೀರು ಸಮರ್ಪಕವಾಗಿ ಬರದಿದ್ದರೆ ನಾಟಿ, ಜೋಳ ಒಣಗುತ್ತದೆ ಎಂದು ದೂರಿದರು.

ಈ ವೇಳೆ ಕೆಲ ರೈತರು ಜೋರಾಗಿ ಕೂಗಾಡಿದರು. ಇದಕ್ಕೆ ಸ್ವಲ್ಪ ಬೇಸರಗೊಂಡ ಪವಿತ್ರ ಅವರು ಕೂಗಾಡಬೇಡಿ, ನಾನು ರೈತ ಹೋರಾಟದಿಂದ ಬೆಳೆದು ಬಂದಿದ್ದೇನೆ. ನೀವು ಕಾಲುವೆ ನೀರನ್ನೇ ನಂಬಿ ಸಾಲ-ಸೋಲ ಮಾಡಿ ನಾಟಿ ಮಾಡಿದ್ದೀರಿ ಎಂಬ ಅರಿವು ನನಗಿದೆ. ನಿಮಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಅದಕ್ಕಾಗಿ ಸಹಾಯವಾಣಿ ಮಾಡಿದ್ದೇವೆ. ನೀರಿಗೆ ಸಂಬಂಧಿಸಿದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಸಹಾಯವಾಣಿಗೆ  ಕರೆ ಮಾಡಿ ತಿಳಿಸಿ ಎಂದು ಕರಪತ್ರ ಹಂಚಿದರು.

ಇನ್ನೆರಡು ದಿನಗಳಲ್ಲಿ ಈ ಭಾಗಕ್ಕೆ ಬರಬೇಕಾದ ನೀರು ತಲುಪಿಸುವ ಜವಾಬ್ದಾರಿ ನಿಮ್ಮದು ಎಂದು ಇಇ ಚಿದಂಬರ್ ಲಾಲ್, ಎಇಇ ಸಂತೋಷ್, ಎಇ ಮಲ್ಲಿಕಾರ್ಜುನ್ ಅವರಿಗೆ ಸೂಚನೆ ನೀಡಿ, ಅಚ್ಚುಕಟ್ಟಿನ ಕೊನೆ ಭಾಗದ ರೈತರ ಭತ್ತ ಕಟಾವಿಗೆ  ಬರುವ ತನಕ ನಾನು ನಿಮ್ಮ ಜೊತೆ ಇರುತ್ತೇನೆ. ಮತ್ತೆ ಮುಂದಿನ ತಿಂಗಳು ಇಲ್ಲಿಗೆ ಬಂದು ನೀರಿನ ನಿರ್ವಹಣೆ ಪರಿಶೀಲಿಸುತ್ತೇನೆ ಎಂದು ರೈತರಿಗೆ ಅಭಯ ನೀಡಿದರು. ನಂತರ ಭಾನುವಳ್ಳಿ ಗ್ರಾಮಕ್ಕೆ ಆಗಮಿಸಿ, ಡಿ.ಬಿ. ಕೆರೆ ಪಿಕಪ್‌ ನಾಲೆ ವೀಕ್ಷಿಸಿ, ರೈತರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರು ಕಳೆದ ವರ್ಷ ಬೇಸಿಗೆ ಸಮಯದಲ್ಲಿ ನೀರಿಲ್ಲದೆ ಕೊನೆ ಭಾಗದಲ್ಲಿ ನಾಟಿ ಒಣಗಿದ್ದವು. ನಾನು ಮತ್ತು ಅಂದಿನ ಎಇಇ ರವಿಕುಮಾರ್ ಅವರು R2 ವರೆಗೆ ಹೋಗಿ ಕೆಳ ಭಾಗಕ್ಕೆ ಬೇಕಾದ ನೀರನ್ನು ಹೋರಾಟ ಮಾಡಿ ತಂದಿದ್ದೆವು. ಈ ಬಾರಿ ಕಾಡಾ ಅಧ್ಯಕ್ಷರು ಆ ಸಮಸ್ಯೆ ತಪ್ಪಿಸಿದ್ದಾರೆ. ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿವಾಗಿ ನಿರ್ವಹಿಸಿದ್ದಾರೆ. ಭದ್ರಾ ಕಾಡಾಗೆ ಇಂತಹ ಅಧ್ಯಕ್ಷರ ಅವಶ್ಯಕತೆ ಇತ್ತು ಎಂದು ರೈತರ ಪರವಾಗಿ ಪವಿತ್ರಾ ಅವರನ್ನು ಅಭಿನಂದಿಸಿದರು.ಡಿ.ಬಿ.  ಕೆರೆ ಪಿಕಪ್‌ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಲು ಗಮನ ಹರಿಸಿ ಎಂದು ಮನವಿ ಮಾಡಿದರು. 

ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಕೊಟ್ರೇಶ್, ರೈತ ಸಂಘದ ಸಿರಿಗೆರೆ ಪಾಲಾಕ್ಷಪ್ಪ, ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ರೈತರಾದ ಯಲವಟ್ಟಿಯ ಅಂಜಿನಪ್ಪ, ಚನ್ನಬಸಪ್ಪ, ಶಾಂತವೀರಪ್ಪ, ರಾಮಚಂದ್ರಪ್ಪ, ಹನುಮಂತಗೌಡ, ಕೆ. ಮಂಜಪ್ಪ, ಸಿರಿಗೆರೆಯ ಬಿ. ಶೇಖರಪ್ಪ, ಮಾಗೋಡ್ ರವಿ, ಪ್ರಭು, ಭಾನುವಳ್ಳಿಯ ಹೆಚ್.ಎಸ್. ಕರಿಯಪ್ಪ, ಕೆಂಚಪ್ಪ, ಪವಾಡಿ ಮಂಜಪ್ಪ, ಮಲ್ಲಪ್ಪ ರೆಡ್ಡಿ, ಯಲ್ಲಪ್ಪ ರೆಡ್ಡಿ, ಎಂ. ರವಿ ಇನ್ನಿತರರು ಹಾಜರಿದ್ದರು.

ನಂತರ ಕಾಡಾ ಅಧ್ಯಕ್ಷರು ಕೆ. ಬೇವಿನಹಳ್ಳಿ, ಬನ್ನಿಕೋಡು, ದೊಡ್ಡಬಾತಿ, ಕಕ್ಕರಗೊಳ್ಳ ಗ್ರಾಮಗಳ ಕೊನೆ ಭಾಗದ ಕಾಲುವೆಗಳಿಗೆ ಭೇಟಿ ನೀಡಿ, ನೀರಿನ ನಿರ್ವಹಣೆ ಕುರಿತು ರೈತರ ಸಮಸ್ಯೆ ಆಲಿಸಿ, ಇಂಜಿನಿಯರ್‌ಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

error: Content is protected !!