ಜಗಳೂರು, ಜು. 27- ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಸಾರ್ವಜನಿಕರು ಪರದಾಡುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ವಾಯಿಲ್ ಗಳನ್ನು ಕಸದ ಬುಟ್ಟಿಗೆ ಬಿಸಾಡಿರುವು ದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಲಸಿಕೆ ನಷ್ಟ ಮಾಡುವುದು ರಾಷ್ಟ್ರೀಯ ನಷ್ಟ. ಆದ್ದರಿಂದ ಲಸಿಕೆ ನಷ್ಟವಾಗದಂತೆ ಹಾಗೂ ಲಸಿಕೆ ಹಾಳು ಮಾಡದಂತೆ ಬಳಸಬೇಕೆಂದು ಸ್ವತಃ ಪ್ರಧಾನಮಂತ್ರಿಗಳು ಮನವಿ ಮಾಡಿಕೊಂಡಿ ದ್ದರೂ ಸಹ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ವಾಯಿಲ್ ಗಳನ್ನು ಮನಬಂದಂತೆ ಬಳಸಿ ಬಿಸಾಡಿರುವುದು ಅಚ್ಚರಿ ತರಿಸಿದೆ.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳ ಕಚೇರಿ ಕಟ್ಟಡದ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿವೆ. ಸಾರ್ವಜನಿಕರು ಪ್ರತಿನಿತ್ಯ ಲಸಿಕೆ ಪಡೆಯಲು ಸಾಲು-ಸಾಲು ನಿಲ್ಲುತ್ತಾರೆ. ಲಸಿಕೆ ಕೊರತೆಯಾದ ಸಂದರ್ಭದಲ್ಲಿ ಪರದಾಡಿದವರು ಬಹಳ ಜನ.
ಒಬ್ಬರಿಗೆ ಕೋವಿಡ್ ಲಸಿಕೆ 0.5 ಎಂಎಲ್ ನೀಡಲಾಗುತ್ತದೆ. ಒಂದು ವಾಯಿಲ್ ತೆರೆದರೆ 10 ಜನರಿಗೆ ಲಸಿಕೆ ನೀಡಲಾಗುತ್ತದೆ. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಸಾಕಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ವಾಯಿಲ್ ಗಳಿಂದ ಕೇವಲ ಒಬ್ಬರು ಅಥವಾ ಇಬ್ಬರಿಗೆ 1 ಅಥವಾ 2 ಡೋಸ್ ಬಳಸಿ ಉಳಿದ ಲಸಿಕೆಯನ್ನು ಕಸದಬುಟ್ಟಿಗೆ ಬಿಸಾಡಲಾಗಿದೆ. ಅಂದರೆ ಸುಮಾರು 200 ಜನರಿಗೆ ನೀಡಬೇಕಾದಷ್ಟು ಲಸಿಕೆ ನಷ್ಟವಾಗಿರುವುದು ಖಂಡನೀಯ.
ದಾವಣಗೆರೆ ಜಿಲ್ಲಾ ಆರ್.ಸಿ. ಹೆಚ್ ಅಧಿಕಾರಿಗಳ ಕಚೇರಿಯಿಂದ ಕೋವಿಶೀಲ್ಡ್ ಲಸಿಕೆಗಳು ಸರಬರಾಜಾಗಿವೆ. ಇಲ್ಲಿಂದ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಲಸಿಕೆ ಕೇಂದ್ರ ಇಲ್ಲದ ಸಾರ್ವಜನಿಕ ಆಸ್ಪತ್ರೆಯ ಕೊಠಡಿಗಳಲ್ಲಿ ಬಳಸದೇ ಬಿಸಾಡಿರುವ ಲಸಿಕಾ ವಾಯಿಲ್‌ಗಳು ಲಭಿಸಿರುವುದು ಅಚ್ಚರಿ ಮೂಡಿಸಿದೆ.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ಅವರು, ಬಳಸದೆ ಬಿಸಾಕಿರುವ ವಾಯಿಲ್ ಗಳನ್ನು ವಶಪಡಿಸಿಕೊಂಡಿದ್ದು. ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಲಸಿಕೆ ದುರುಪಯೋಗವಾಗಿರುವ ಪತ್ರ ಬರೆದು ವಿವರಣೆ ಕೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯವರು ಲಸಿಕೆ ವಾಯಿಲ್ ಗಳನ್ನು ಮನಬಂದಂತೆ ತೆಗೆದುಕೊಂಡು ಹೋಗಿ ತಮಗೆ ಬೇಕಾದವರಿಗೆ ಲಸಿಕೆ ಹಾಕಿ ಉಳಿದಿರುವ ವಾಯಲ್ ಗಳನ್ನು ಈ ರೀತಿ ಬಿಸಾಡಿರುವ ಬಗ್ಗೆ ದೂರುಗಳಿವೆ. ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿಗೆ ಫಲಾನುಭವಿಗಳನ್ನು ಕರೆಸಿ ಲಸಿಕೆ ಹಾಕಿಸುವಂತೆ ಮೌಖಿಕವಾಗಿ ಸೂಚಿಸಲಾಗಿತ್ತು. ಆದರೂ ಕೂಡ ಸಾರ್ವಜನಿಕ ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ಉಡಾಫೆ ಮತ್ತು ದೌರ್ಜನ್ಯದಿಂದ ಲಸಿಕೆಗಳನ್ನು ಬಳಸಿ ಬಿಸಾಡಿರಬಹುದಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಫಾರ್ಮಾಸಿಸ್ಟ್ ಅಧಿಕಾರಿ ಮತ್ತು ಸಿಬ್ಬಂದಿ ಲಸಿಕೆ ಸರಬರಾಜು ಹಂಚಿಕೆಯ ಜವಾಬ್ದಾರಿಯನ್ನು ಹೊಂದಿದ್ದು, ಈ ಬಗ್ಗೆ ಲಸಿಕೆ ದುರುಪಯೋಗವಾಗಿರುವುದು ಪರಿಶೀಲಿಸಿದಾಗ ಕಂಡುಬಂದಿರುತ್ತದೆ. ಈ ಸಂಬಂಧವಾಗಿ ಸೂಕ್ತ ಕ್ರಮಕ್ಕೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ನಾಗರಾಜು ವಿವರಣೆ ಕೇಳಿದ್ದಾರೆ ಹಾಗೂ ದಾವಣಗೆರೆ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಸಂದರ್ಭದಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯು ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ ಬಗ್ಗೆ ಅವರನ್ನು ಪ್ರತಿಯೊಬ್ಬರು ಗೌರವಿಸಿದ್ದಾರೆ. ಆದರೆ ಜನರ ಪ್ರಾಣ ರಕ್ಷಣೆಗಾಗಿ ಆರಂಭಿಸಿರುವ ರಾಷ್ಟ್ರೀಯ ಮಟ್ಟದ ಲಸಿಕಾ ಅಭಿಯಾನಕ್ಕೆ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
– ಬಿ.ಪಿ. ಸುಭಾನ್,
[email protected]