ಎಸ್ಸೆಸ್ಸೆಲ್ಸಿ ಪರೀಕ್ಷೆ ಸವಾಲಾಗಿ ಸ್ವೀಕರಿಸಿ

ದಾವಣಗೆರೆ, ಮಾ.10- ಇದೇ ಪ್ರಥಮ ಬಾರಿಗೆ ಐದು ತಿಂಗಳಲ್ಲಿ ರಾಜ್ಯ ಮಟ್ಟದ ಎಸ್ಎಸ್ಎಲ್ ಸಿ ಪಬ್ಲಿಕ್ ಪರೀಕ್ಷೆ ಎದುರಿಸಬೇಕಾಗಿದ್ದು, ಯಾವುದೇ ಭಯ, ಆತಂಕಕ್ಕೆ ಒಳಗಾಗದೇ ಈ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. 

ಅವರು, ಇಂದು ನಗರದ ತರಳಬಾಳು ಜಗದ್ಗುರು ಅನುಭವ ಮಂಟಪ ಪ್ರೌಢಶಾಲಾ ಆವರಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ತರಳಬಾಳು ಜಗದ್ಗುರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತಯಾರಿ ಉಚಿತ ಕಾರ್ಯಾಗಾರದ ಅಭಿಯಾನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೇವಲ ಐದು ತಿಂಗಳಲ್ಲಿ ಪಠ್ಯವನ್ನು ಮುಗಿಸಿ, ಪರೀಕ್ಷೆಗೆ ಸಿದ್ಧಗೊಳ್ಳುವಂತೆ ಮಾಡಲಾಗುತ್ತಿದೆ. ಸುಮಾರು ಶೇ.30ರಷ್ಟು ಪಠ್ಯ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಇನ್ನೂ 100 ದಿನ ಮಾತ್ರ ಬಾಕಿ ಉಳಿದಿದ್ದು, ಒಂದೊಂದು ಗಂಟೆ ಒಂದೊಂದು ವಿಷಯಕ್ಕೆ ಮೀಸಲಿಟ್ಟು ಓದಿ ಪರೀಕ್ಷೆಗೆ ತಯಾರಾಗಬೇಕು. ಓದುವುದು, ವಿರಮಿಸುವುದು ಹೀಗೆ 24 ಗಂಟೆಯ ವೇಳಾಪಟ್ಟಿ ಸಿದ್ದಪಡಿಸಿಕೊಂಡು ಅದರಂತೆಯೇ ಚಾಚೂ ತಪ್ಪದೇ ಪಾಲನೆ ಮಾಡಬೇಕು. ಆಗ ಮಾತ್ರ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ಫಲಿತಾಂಶ ಪಡೆಯಬಹುದಾಗಿದೆ. ಸವಾಲಾಗಿ ಸ್ವೀಕರಿಸಿದಾಗ ಯಾವುದೂ ಕಷ್ಟವಲ್ಲ. ಸಾಧನೆ ಸಾಧ್ಯವಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದೊಂದಿಗೆ ಗುರಿ ತಲುಪುವ ಛಲವಿರಲಿ ಎಂದು ಸಲಹೆ ನೀಡಿದರು.

ಪರೀಕ್ಷೆ ಸಮೀಪಿಸಿದಾಗ, ಅಲ್ಪ ಸಮಯದಲ್ಲಿ ಅಧ್ಯಯನ ಮಾಡುವುದಕ್ಕಿಂತ ನಿರಂತರ ಕಲಿಕೆ, ಅಂದಿನ ಪಾಠ ಅಂದೇ ಮನನ ಮಾಡಿಕೊಳ್ಳಬೇಕು. ಕಲಿತ ಪ್ರಮುಖ ವಿಷಯಗಳನ್ನು ಟಿಪ್ಪಣಿ ಮಾಡಿಕೊಂಡು ಪರೀಕ್ಷೆ ವೇಳೆ ಅದನ್ನು ಒಮ್ಮೆ ಮನನ ಮಾಡಿಕೊಳ್ಳಿ. ಜೊತೆಗೆ ಮೂರು-ನಾಲ್ಕು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮುಖ್ಯ. ಕಂಠ ಪಾಠ ಮಾಡುವ ಬದಲು ಪಠ್ಯ ವಿಷಯ ಪುನರ್‍ಮನನ ಮಾಡಿಕೊಳ್ಳಬೇಕು.  

– ಡಾ. ಹೆಚ್.ವಿ. ವಾಮದೇವಪ್ಪ.

ಕೇವಲ ಮೂರು ತಾಸಿನ ಪರೀಕ್ಷೆಯಿಂದ ವಿದ್ಯಾರ್ಥಿಯ ಪರಿಪೂರ್ಣ ಜ್ಞಾನವನ್ನು ಅಳೆಯಲು ಅಸಾಧ್ಯ. ಯಾರು ಕೂಡು ದಡ್ಡರಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಬುದ್ಧಿವಂತರೇ. ಪ್ರತಿಭೆ ಕೂಡ ಅಡಗಿದೆ. ಅದನ್ನು ಪೋಷಕರು, ಶಿಕ್ಷಕರು ಗುರುತಿಸುವುದು ಕರ್ತವ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಸ್ವಪ್ರಯತ್ನವಿರಬೇಕು ಎಂದರು. 

ನಿವೃತ್ತ ಶಿಕ್ಷಕ ಬಿ. ವಾಮದೇವಪ್ಪ ಮಾತನಾಡಿ, ಜಾನ ಸಂಪಾದನೆಗೆ ಕಠಿಣ ಪರಿಶ್ರಮ ಮುಖ್ಯ. ಕಲಿತಷ್ಟು ವಿದ್ಯೆ ಕರಗತವಾಗಲಿದೆ. ಸಮಯವನ್ನು ವ್ಯರ್ಥ ಮಾಡದೇ ಪ್ರಶ್ನೆಗಳಿಗೆ ತಕ್ಕಂತ ಪೂರಕ ಉತ್ತರಗಳನ್ನು ಬರೆಯಬೇಕೆಂದರು.

ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಬಿ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಚಾ ರ್ಯರಾದ ಎಂ.ಕೆ. ಪ್ರೇಮ ಕುಮಾರಿ, ಮುಖ್ಯೋಪಾಧ್ಯಾಯ ಎ. ವೆಂಕಟೇಶ್, ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಹೆಚ್. ಮಂಜುನಾಥ, ಜಿ.ಬಿ. ಲೋಕೇಶ್ ಮತ್ತಿತರರಿದ್ದರು. ಎಸ್.ವೀಣಾ ಸ್ವಾಗತಿಸಿದರು. ಸಿಂಚನಾ ನಿರೂಪಿಸಿದರು. ಪಲ್ಲವಿ ವಂದಿಸಿದರು.

 

error: Content is protected !!