ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕಾರ
ಬೆಂಗಳೂರು, ಜು.27 – ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನಾಳೆ ಬುಧವಾರ ಅವರು ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೈಕಮಾಂಡ್ ಒತ್ತಾಯದಂತೆ ಮುಖ್ಯ ಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರೂ ಸಹ, ತಮ್ಮ ಆಪ್ತನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುವುದ ರೊಂದಿಗೆ ಮೇಲುಗೈ ಸಾಧಿಸಿ, ತಮ್ಮ ವಿರೋಧಿ ಬಣದ ಬಾಯಿ ಮುಚ್ಚಿಸಿದ್ದಾರೆ.
ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ವರಿಷ್ಠರು ಕಳುಹಿಸಿದ್ದ ಲಕೋಟೆಯಲ್ಲಿ ಬಂದಿದ್ದ ಬಸವರಾಜ್ ಬೊಮ್ಮಾಯಿ ಹೆಸರನ್ನು ಸಭೆಯಲ್ಲಿ ಬಹಿರಂಗ ಪಡಿಸಿದರು.
ಇದಾದ ನಂತರ ಪ್ರಧಾನ್ ಅವರು ಬೊಮ್ಮಾಯಿ ಅವರನ್ನು ವೇದಿಕೆಗೆ ಕರೆದು, ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.
ಸಭೆಯ ನಂತರ ಹೇಳಿಕೆ ನೀಡಿರುವ ಪ್ರಧಾನ್, ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರು ಪ್ರಸ್ತಾಪಿಸಿದರು. ಇದಕ್ಕೆ ಶಾಸಕರಾದ ಗೋವಿಂದ ಕಾರಜೋಳ, ಆರ್. ಅಶೋಕ, ಕೆ.ಎಸ್. ಈಶ್ವರಪ್ಪ. ಬಿ. ಶ್ರೀರಾಮುಲು, ಎಸ್.ಟಿ ಸೋಮಶೇಖರ, ಪೂರ್ಣಿಮ ಶ್ರೀನಿವಾಸ ಅನುಮೋದಿಸಿದರು ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ನಂತರ ಬೊಮ್ಮಾಯಿ, ಯಡಿಯೂರಪ್ಪನವರ ಕಾಲಿಗೆ ಬಿದ್ದು, ನಮಸ್ಕರಿಸಿ, ತಮ್ಮ ಸಹೋ ದ್ಯೋಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಇಂಜಿನಿಯರಿಂಗ್ನಿಂದ ಸಿಎಂ ಗಾದಿಯವರೆಗೆ
ಸುದೀರ್ಘ ರಾಜಕೀಯ ಅನುಭವ, ಬಿಎಸ್ವೈ ನಿಷ್ಠೆಗೆ ಸಂದ ಫಲ
ಬೆಂಗಳೂರು, ಜು. 27 – ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ನಿಷ್ಠಾವಂತರೆಂದು ಗುರುತಿಸಲ್ಪಟ್ಟಿರುವ ಬಸವರಾಜ ಸೋಮಪ್ಪ ಬೊಮ್ಮಾಯಿ, ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಜಾಗಕ್ಕೆ ಇನ್ನೊಬ್ಬ ಲಿಂಗಾಯತ ಮುಖಂಡ ಬಂದಂತಾಗಿದೆ.
61 ವರ್ಷದ ಬೊಮ್ಮಾಯಿ, ಹಿಂದಿನ ಯಡಿ ಯೂರಪ್ಪ ಸರ್ಕಾರದಲ್ಲಿ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಹಾವೇರಿ ಹಾಗೂ ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದರು.
ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಜನತಾದಳದ ಹಿರಿಯ ಮುಖಂಡರಾಗಿದ್ದರು. ಅವರು ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು.
ಜನವರಿ 28, 1960ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ್ದ ಬಸವರಾಜ ಬೊಮ್ಮಾಯಿ, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರು. ಅವರು ಪುಣೆಯ ಟಾಟಾ ಮೋಟರ್ಸ್ನಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ನಂತರ ಕೈಗಾರಿಕೋದ್ಯಮಿಯೂ ಆಗಿದ್ದರು.
ಜನತಾದಳದಲ್ಲಿ ಅವರು ರಾಜಕೀಯ ಜೀವನ ಆರಂಭಿಸಿದ್ದರು. 1997 ಹಾಗೂ 2003ರಲ್ಲಿ ಅವರು ಎರಡು ಬಾರಿ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು.
ನಂತರ ಆಗಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಮತ್ತು ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಜನತಾ ದಳದಿಂದ ಜೆಡಿ (ಯು)ಗೆ ಜಿಗಿದಿದ್ದ ಅವರು, ಫೆಬ್ರವರಿ 2008ರಲ್ಲಿ ಬಿಜೆಪಿಗೆ ಸೇರಿದ್ದರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2013 ಹಾಗೂ 2018ರಲ್ಲಿ ಈ ಕ್ಷೇತ್ರವನ್ನು ಅವರು ಉಳಿಸಿಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅವರು ಜಲ ಸಂಪನ್ಮೂಲ ಹಾಗೂ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ನೀರಾವರಿ ಯೋಜನೆಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಬೊಮ್ಮಾಯಿ, ಈಗ ವಿಸರ್ಜನೆಗೊಂಡ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರ ನೆರಳಿನಂತೆ ಕಾರ್ಯ ನಿರ್ವಹಿಸಿದ್ದರು. ಸಭೆಗಳು ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಯಡಿಯೂರಪ್ಪ ಜೊತೆ ಸಹಾಯವಾಗಿರುತ್ತಿದ್ದರು.
ಮೊದಲು ಗೃಹ ಸಚಿವರಾಗಿದ್ದ ಬೊಮ್ಮಾಯಿ ಅವರಿಗೆ, ಕೆಲ ತಿಂಗಳ ಹಿಂದೆ ಸಂಪುಟ ಪುನರ್ರಚನೆ ನಡೆದಾಗ ಕಾನೂನು, ಸಂಸದೀಯ ವ್ಯವಹಾರಗಳ ಖಾತೆಗಳನ್ನೂ ನೀಡಲಾಗಿತ್ತು.
ಓದು, ಬರಹ, ಗಾಲ್ಫ್ ಹಾಗೂ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿರುವ ಬೊಮ್ಮಾಯಿ, ರಾಜ್ಯ ಕ್ರಿಕೆಟ್ ಒಕ್ಕೂಟ, ಧಾರವಾಡದ ಅಧ್ಯಕ್ಷರಾಗಿ ಹಾಗೂ ಧಾರವಾಡ ಜಿಲ್ಲೆಯ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಅರುಣೋದಯ ಸಹಕಾರಿ ಸೊಸೈಟಿಯನ್ನೂ ಅವರು ಸ್ಥಾಪಿಸಿದ್ದಾರೆ.
ಅವರ ಜಾತಿ, ಶೈಕ್ಷಣಿಕ ಅರ್ಹತೆ, ಆಡಳಿತ ಸಾಮರ್ಥ್ಯ ಮತ್ತು ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರ ಜೊತೆ ಹೊಂದಿರುವ ಒಡನಾಟಗಳು ಮುಖ್ಯಮಂತ್ರಿ ಸ್ಥಾನ ಒಲಿದು ಬರಲು ನೆರವಾಗಿವೆ.
ಅಪ್ಪ – ಮಗ ಇಬ್ಬರೂ ಮುಖ್ಯಮಂತ್ರಿ
ಬೆಂಗಳೂರು, ಜು. 27 – ಬಸವರಾಜ ಬೊಮ್ಮಾಯಿ ಅವರು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಆಯ್ಕೆಯಾಗುವುದರೊಂದಿಗೆ, ಒಂದೇ ಕುಟುಂಬದಲ್ಲಿ ತಂದೆ – ಮಗ ಮುಖ್ಯಮಂತ್ರಿಯಾದಂತಾಗಿದೆ. ಈ ಹಿಂದೆ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ಜನತಾದಳದಿಂದ ಮುಖ್ಯಮಂತ್ರಿಯಾಗಿದ್ದರು.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಆಸಕ್ತಿಕರ ಅಂಶವೆಂದರೆ, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿದ್ದ ರಾಮಕೃಷ್ಣ ಹೆಗಡೆ 1988-89ರಲ್ಲಿ ರಾಜೀನಾಮೆ ನೀಡಿದಾಗ ಎಸ್.ಆರ್. ಬೊಮ್ಮಾಯಿ ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಈಗ ಹೈಕಮಾಂಡ್ ಸೂಚನೆಯಂತೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ, ಬಸವರಾಜ ಬೊಮ್ಮಾಯಿ ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ.
ಬಿಎಸ್ವೈ ನನ್ನ ರಾಜಕೀಯ ಗುರು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ
ಬೆಂಗಳೂರು, ಜು. 27 – ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ನನ್ನ ರಾಜಕೀಯ ಗುರು. ಅವರ ಆಶೀರ್ವಾದ ದೊಂದಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಯಾಗಿದ್ದೇನೆ ಎಂದಿರುವ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಯಾದ ನಂತರ ಪತ್ರಕರ್ತರೊಂದಿಗೆ ಮಾತ ನಾಡುತ್ತಿದ್ದ ಅವರು, ಯಡಿಯೂರಪ್ಪನವರು ತ40 ವರ್ಷ ಹಗಲಿರುಳು ಒಂದು ಮಾಡಿ, ಬೆವರನ್ನು ಸುರಿಸಿ ಬಿಜೆಪಿ ಕಟ್ಟಿದ್ದಾರೆ.
ಅವರು ಎರಡು ವರ್ಷ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕೊರೊನಾ ಹಾಗೂ ಪ್ರವಾಹ ಎದುರಿಸಿ ರಾಜ್ಯ ಮುನ್ನಡೆಸಿದ್ದಾರೆ. ಬೊಕ್ಕಸಕ್ಕೆ ಕೊರತೆಯಾಗದಂತೆ ಉತ್ತಮ ಹಣಕಾಸಿನ ನಿರ್ವಹಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಮಾರ್ಗದರ್ಶನ, ಅವರ ದಾರಿಯಲ್ಲಿ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಜನಪರವಾಗಿರುವ ಹಾಗೂ ಎಲ್ಲರಿಗೂ ನ್ಯಾಯ ಸಮ್ಮತ ಆಡಳಿತ ಕೊಡಬೇಕೆನ್ನುವ ಸಂಕಲ್ಪ ಮಾಡಿದ್ದೇನೆ. ಪ್ರತಿಯೊಂದು ವಿಚಾರದಲ್ಲಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿ ಇದೆ. ಜನರಿಗೆ ನೆರವಾಗಲು ಹಗಲಿರುಳು ಶ್ರಮಿಸುತ್ತೇನೆ. ಮುಂಬರುವ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ತಮ್ಮ ಮೇಲೆ ನಂಬಿಕೆ ಇರಿಸಿದ ಬಿಜೆಪಿ ನಾಯಕರು, ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ.
ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಕಾರ್ಯಕರ್ತರ ವಿಶ್ವಾಸ ಗೆಲ್ಲುವುದಾಗಿ ಹೇಳಿರುವ ಅವರು, ಪಕ್ಷದ ಹಿರಿಯರ ಆಶೀರ್ವಾದದೊಂದಿಗೆ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಸಾಗುವುದಾಗಿ ಹೇಳಿದ್ದಾರೆ.
ಇದಾದ ನಂತರ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಪತ್ರವನ್ನು ರಾಜ್ಯಪಾಲ ಗೆಹ್ಲೋಟ್ ಅವರಿಗೆ ನೀಡಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡ ಬಸವರಾಜ್ ಬೊಮ್ಮಯಿ ಅವರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು, ನಾಳೆ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿದರು. ಅದರಂತೆ, ಬೆಳಿಗ್ಗೆ 11 ಗಂಟೆಗೆ ಬೊಮ್ಮಾಯಿ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದಕ್ಕೂ ಮುಂಚೆ, ಸಂಘ ಪರಿವಾರದ ಮೂಲದ ಹಲವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಶಾಸಕರಾದ ಸಿ.ಟಿ. ರವಿ, ಸುನೀಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ್ ಹೆಸರನ್ನು ಹೈಕಮಾಂಡ್ ಪರಿಗಣಿಸಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ, ಯಡಿಯೂರಪ್ಪ ಈ ಪ್ರಸ್ತಾಪಕ್ಕೆ ಸಮ್ಮತಿಸಲಿಲ್ಲ. ಅಂತಿಮವಾಗಿ ಯಡಿಯೂರಪ್ಪ ಅವರ ಆಪ್ತರಾದ ಬೊಮ್ಮಾಯಿ ಹೆಸರನ್ನು ಹೈಕಮಾಂಡ್ ಪ್ರಸ್ತಾಪಿಸಿತು. ಆಗ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಚ್ಛ ಹಾಗೂ ವಿವಾದ ರಹಿತ ವರ್ಚಸ್ಸು ಹೊಂದಿರುವ ಬೊಮ್ಮಾಯಿ, ಯಡಿಯೂರಪ್ಪ ಆಪ್ತರೆಂದು ಗುರುತಿಸಲ್ಪಟ್ಟಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ನಂತರ ಯಾರು ಎಂಬ ತಿಂಗಳುಗಳ ಕಾಲ ನಡೆದ ಚರ್ಚೆಗೆ ತೆರೆ ಬಿದ್ದಂತಾಗಿದೆ.
ಜನತಾಪರಿವಾರ ಮೂಲದಿಂದ ಬಂದ ಬಸವರಾಜ್ ಬೊಮ್ಮಾಯಿ, ಹಾವೇರಿ ಶಿಗ್ಗಾವಿ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಗೊಂಡಿದ್ದರು.
ಈ ಹಿಂದೆ ಯಡಿಯೂರಪ್ಪ ಮತ್ತು ಸದಾನಂದಗೌಡರ ಸಂಪುಟದಲ್ಲಿ ನೀರಾವರಿ, ಗೃಹ, ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಬಲಗೈ ಆಗಿ ಕೆಲಸ ನಿರ್ವಹಿಸಿ, ಅವರ ಮಾರ್ಗದರ್ಶನದಲ್ಲೇ ನಡೆದಿದ್ದರು. ಇದಕ್ಕೆ ಪ್ರತಿಫಲ ದೊರೆತಿದೆ.