ಜಿಲ್ಲಾ ಕಾಂಗ್ರೆಸ್ನಿಂದ ಶ್ರದ್ಧಾಂಜಲಿಯಲ್ಲಿ ದಿನೇಶ್ ಕೆ.ಶೆಟ್ಟಿ ಶ್ಲ್ಯಾಘನೆ
ದಾವಣಗೆರೆ,ಮೇ 9- ನಿನ್ನೆ ನಿಧನರಾದ ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಇಂದು ಏರ್ಪಾಡಾಗಿದ್ದ ಸಭೆಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಹಣ, ಅಧಿಕಾರಕ್ಕೆ ಎಂದಿಗೂ ತಾವು ನಂಬಿದ ಸಿದ್ದಾಂತವನ್ನು ಬಲಿ ನೀಡದೇ ತಮ್ಮ ಜೀವನದ ಕೊನೆಯವರೆಗೂ ಹೋ ರಾಟದ ಬದುಕು ನಡೆಸಿದ್ದರು ಎಂದು ಸ್ಮರಿಸಿದರು.
ಹೆಚ್ಕೆಆರ್ ಅವರ ಹೋರಾಟದ ಬದುಕಿನಲ್ಲಿ ಅವರಿಗೆ ಅನೇಕ ಆಸೆ-ಆಮಿಷಗಳನ್ನು ಒಡ್ಡುತ್ತಿದ್ದರೂ ಸಹ ಎಂದಿಗೂ ಸಹ ಆಸೆ-ಆಮಿಷಗಳಿಗೆ ಬಲಿಯಾಗದೇ ನೇರ ನಡೆ-ನುಡಿಯ ಮೂಲಕ ಶ್ರಮಿಕರು, ಶೋಷಿತರ ಪರವಾಗಿ ಹೋರಾಟ ನಡೆಸಿದ್ದರು ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಹೋರಾಟದ ಮೂಲಕ ಅಧಿಕಾರಕ್ಕೆ ಬಂದ ಹೆಚ್ಕೆಆರ್ ಅವರು ಅಧಿಕಾರ ಮುಗಿದ ನಂತರ ಮನೆಯಲ್ಲಿ ಕುಳಿತುಕೊಳ್ಳದೇ ಈ ಸಮಾಜಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದರು.
ನಗರಸಭೆ ಅಧ್ಯಕ್ಷರಾದ ಹೆಚ್ಕೆಆರ್ ಅವರು ಪಂಪಾಪತಿಯವರಂತೆ ದಾವಣಗೆರೆ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅಧಿಕಾರದ ಗದ್ದುಗೆ ಮುಳ್ಳಿನ ಹಾಸಿಗೆ ಇದ್ದಂತೆ ಅದನ್ನು ಹೂವಿನ ಹಾಸಿಗೆ ಮಾಡಿಕೊಳ್ಳುವ ಜವಾಬ್ದಾರಿ ಅಧಿಕಾರ ನಡೆಸುವವರ ಬಳಿ ಇರಲಿದೆ ಎಂದು ಹೇಳುತ್ತಿದ್ದರೂ ಎಂದು ತಮ್ಮ ಹಿಂದಿನ ದಿನಗಳನ್ನು ಅವರು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಲಿಯಾಖತ್ ಅಲಿ, ಶ್ರೀಕಾಂತ್ ಬಗರೆ, ಯುವರಾಜ್, ಮಹ್ಮದ್ ಜಿಕ್ರಿಯಾ, ಸುರೇಶ್ ಜಾಧವ್, ರಿಯಾಜುದ್ದೀನ್, ಹರೀಶ್, ಫಯಾಜ್ ಅಹ್ಮದ್, ಮೆಹಬೂಬ್ ಬಾಷಾ ಮತ್ತಿತರರಿದ್ದರು.