ಕೊರೊನಾ ಭಯವಿಲ್ಲದೇ ಜನಜಂಗುಳಿ

ಮಾರುಕಟ್ಟೆಯಲ್ಲಿ ತರಕಾರಿ, ದಿನಸಿಗೆ ಮುಗಿಬಿದ್ದ ಜನ, ಮುನ್ನೆಚ್ಚರಿಕೆ ಮಾಯ

ದಾವಣಗೆರೆ, ಮೇ 9- ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸಿಗದಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಸೋಮವಾರದಿಂದ 14 ದಿನಗಳ ಲಾಕ್‌ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಗರದ ಜನರು ತರಕಾರಿ, ದಿನಸಿ ಖರೀದಿಗೆ ಮಾರುಕಟ್ಟೆಗೆ ಮುಗಿ ಬಿದ್ದಿದ್ದರು.

ನಾಳೆಯಿಂದ ತರಕಾರಿ ಸಿಗುವುದೋ, ಇಲ್ಲವೋ ಎಂಬಂತೆ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ತರಕಾರಿ ಮಾರುಕಟ್ಟೆಯಲ್ಲಿ ಕೇವಲ ವ್ಯಾಪಾರಸ್ಥರಿಗೆ, ರೈತರಿಗೆ ಹಾಗೂ ತಳ್ಳುಗಾಡಿ ವ್ಯಾಪಾರಸ್ಥರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದಾರೆ. ಆದರೂ ಕೂಡ ಜನರು ತಂಡೋಪ ತಂಡವಾಗಿ ತರಕಾರಿ ಖರೀದಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಸರಿಯಾಗಿ ಹಾಕಿಕೊಳ್ಳದೆ ವ್ಯಾಪಾರ, ವಹಿವಾಟು ನಡೆಸಿದರು. 

ಕೋವಿಡ್ ಸೋಂಕಿತರ ಸಂಖ್ಯೆ, ಸಾವು-ನೋವು ಹೆಚ್ಚಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಜನರು ಮಾತ್ರ ಯಾವುದೇ ಭಯವಿಲ್ಲದೇ ವ್ಯಾಪಾರ, ವಹಿವಾಟು ನಡೆಸಿದ್ದು ಕೆ.ಆರ್. ಮಾರುಕಟ್ಟೆಯಲ್ಲಿ ಕಂಡು ಬಂತು. ಸೋಮವಾರದಿಂದ ಟಫ್ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಕಾಲಿಡಲು ಸಹ ಜಾಗವಿರಲಿಲ್ಲ. ಗಡಿಯಾರ ಕಂಬ, ಚಾಮರಾಜ ಪೇಟೆ, ಚೌಕಿಪೇಟೆಗಳಲ್ಲೂ ಇದೇ ಸ್ಥಿತಿ ಇತ್ತು.

ಮನೆ ಬಾಗಿಲಿಗೆ ಹೋಗಿ ತಳ್ಳುಗಾಡಿ ಮುಖಾಂತರ ತರಕಾರಿ ವ್ಯಾಪಾರ ಮಾಡಬೇಕು ಎನ್ನುವ ಆದೇಶವಿದ್ದರೂ ಜನರು ಮಾರುಕಟ್ಟೆಯತ್ತ ಧಾವಿಸಿದರು. ಹತ್ತು ಗಂಟೆಯಾದರೂ ಜನರು ವ್ಯಾಪಾರ ವಹಿವಾಟು ನಡೆಸಿದರು. 

ಹಣ್ಣು, ತರಕಾರಿ, ಸೊಪ್ಪು, ದಿನಸಿ ಖರೀದಿಗೆ ಜನರು ಮುಂದಾಗಿದ್ದರಿಂದ ಒಮ್ಮುಖ ರಸ್ತೆ, ನೋ ಪಾರ್ಕಿಂಗ್ ಸ್ಥಳ ಯಾವುದನ್ನೂ ಗಮನಿಸದೆ ವಾಹನಗಳನ್ನು ಮಾರುಕಟ್ಟೆ ಬಳಿ ಸಾಲು ಸಾಲಾಗಿ ‌ನಿಲ್ಲಿಸಿದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸಂಚಾರ ದಟ್ಟಣೆಯಿಂದ ಕೆ.ಆರ್. ಮಾರ್ಕೆಟ್ ಫುಲ್ ರಶ್ ಆಗಿತ್ತು.

ಜನಜಂಗುಳಿಯನ್ನು ಕಡಿಮೆ ಮಾಡಲು ಪೊಲೀಸರು ಪ್ರಯತ್ನ ಪಟ್ಟರೂ ಅದಕ್ಕೆ ಜನ ಬಗ್ಗಲಿಲ್ಲ. ಇದರಿಂದ ಅಲ್ಲಲ್ಲಿ ಪೊಲೀಸರು ಜನರಿಗೆ ಲಾಠಿ ರುಚಿ ತೋರಿಸಿದರು. ಇನ್ನು ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು, ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಿದರು.

ಹಠಮಾರಿತನಕ್ಕೆ ಬೇಸರ: ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳು ವಂತೆ ವ್ಯಾಪಾರಸ್ಥರು ಕೇಳಿಕೊಂಡರೂ ಅದಕ್ಕೆ ಮನ್ನಣೆ ನೀಡದೇ ಜನರು ಹಠಮಾರಿತನ ಪ್ರದರ್ಶನ ಮಾಡುವುದಾಗಿ ಅಂಗಡಿಯವರು ಬೇಸರಿಸಿದರು.

ಸಮಯ ಮುಗಿದರೂ ಮಾರುಕಟ್ಟೆ ನೆಪದಲ್ಲಿ ಜನರು ಬೈಕ್, ಕಾರಿನಲ್ಲಿ ಅಡ್ಡಾಡುತ್ತಿ ದ್ದರು. ಮುಖ್ಯ ರಸ್ತೆಗಳಲ್ಲಿ ಪೊಲೀಸರು ಅವರನ್ನು ತಡೆಗಟ್ಟಿ ವಿಚಾರಣೆ ಮಾಡಿ, ದಂಡವನ್ನು ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.

error: Content is protected !!